ಪುತ್ತೂರು, ಆ.25: ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಪ್ರಚೋದನಕಾರಿ ಹಾಗೂ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮಂಜುನಾಥ್’ ಎಂಬ ಹೆಸರಿನ ವಾಟ್ಸಾಪ್ ಖಾತೆಯಿಂದ ರಾಜಕೀಯ ಪಕ್ಷವೊಂದರ ಹೆಸರಿನಲ್ಲಿ, ಆಗಸ್ಟ್ 26ರಂದು ಪುತ್ತೂರು ಬಂದ್ ನಡೆಸುವಂತೆ ಸವಾಲು ಹಾಕುವ ರೀತಿಯ ಪ್ರಚೋದನಕಾರಿ ಸಂದೇಶವನ್ನು ಪ್ರಸಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದೇಶವು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ವಾಟ್ಸಾಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ. 103/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ವಾಟ್ಸಾಪ್ ಖಾತೆಯ ಹಿಂದಿರುವ ವ್ಯಕ್ತಿಯನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಸುದ್ದಿಯನ್ನು ಪರಿಶೀಲಿಸದೆ ಹಂಚಿಕೊಳ್ಳಬಾರದು ಹಾಗೂ ಪ್ರಚೋದನಕಾರಿ ಅಥವಾ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.



























