ಪುತ್ತೂರು: ಸ. ಪ್ರ .ದ ಕಾಲೇಜು ಬೆಟ್ಟಂಪಾಡಿ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಿಜ್ಞಾನ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮತ್ತು ಪರಿಸರದ ಕುರಿತಾದ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸುಬೋಧ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ಶಾಸ್ತ್ರಿ ಸಿ ಇವರು ಪರಿಸರ ರಕ್ಷಣೆ ಹಾಗೂ ವಿಜ್ಞಾನದ ವಾಸ್ತವಾಂಶಗಳ ಕುರಿತು ಮಾತನಾಡುತ್ತಾ ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ಮೊದಲು ನಮ್ಮನ್ನು ಉತ್ತಮರನ್ನಾಗಿಸಿದ ಸಮಾಜಕ್ಕೆ ನಾವೇನು ಉತ್ತಮವಾದುದನ್ನು ಕೊಡಬಲ್ಲೆವು ಎನ್ನುವುದರ ಅರಿವು ನಮ್ಮಲ್ಲಿರಬೇಕು ಮತ್ತು ಇದರಿಂದ ಸಮಾಜಘಾತುಕ ಚಟುವಟಿಕೆಗಳನ್ನು ತಪ್ಪಿಸಲು ಸಾಧ್ಯ. ಪರಿಸರದ ಮಹತ್ವ ಹಾಗೂ ಪರಿಸರದ ಬಗೆಗಿನ ಕಾಳಜಿಯ ಕುರಿತು ಮಾತನಾಡಿ,ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ನಾವು ಮುಖ್ಯ ಪಾತ್ರ ವಹಿಸಬೇಕು ಎಂದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಹರಿಪ್ರಸಾದ್ ಎಸ್ ಇವರು ವಿಜ್ಞಾನದ ವಿದ್ಯಾರ್ಥಿಗಳು ಸದಾ ಕುತೂಹಲ ಹಾಗೂ ಪ್ರಶ್ನಿಸುವ ಗುಣಗಳನ್ನು ಹೊಂದಿರಬೇಕು ಎಂದರು. ವಿಜ್ಞಾನವು ಶಿಸ್ತು ಜವಾಬ್ದಾರಿಯ ಗುಣವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ವಿಜ್ಞಾನದ ವಿಸ್ಮಯ ಸಂಗತಿಗಳನ್ನು ಪ್ರಾಥಮಿಕ ಶಿಕ್ಷಣದಲ್ಲೇ ಕಲಿಯುವುದರಿಂದ ವಿಜ್ಞಾನದ ಮೇಲಿನ ಒಲವು ಹಾಗೂ ಕುತೂಹಲ ಹೆಚ್ಚುತ್ತದೆ ಎಂದರು. ಸ್ವಾಮಿ ವಿವೇಕಾನಂದ ಹಾಗೂ ಕಲಾಂ ರ ವೈಜ್ಞಾನಿಕ ಚಿಂತನೆಗಳನ್ನು ಉತ್ತಮ ನಿದರ್ಶನವಾಗಿಟ್ಟುಕೊಂಡು ಮಾತನಾಡಿದ ಇವರು ವಿಜ್ಞಾನದ ಕುರಿತಾದ ತಮ್ಮ ಅನಿಸಿಕೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಉದಯರಾಜ್ ಎಸ್ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶಶಿಕುಮಾರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ದಾಮೋದರ ಕಣಜಾಲು ಹಾಗೂ ಗ್ರಂಥಪಾಲಕರಾದ ರಾಮ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನ ವಿಜ್ಞಾನ ಸಂಘದ ಅಧ್ಯಕ್ಷರಾದ ಪುಣ್ಯಶ್ರೀ ರೈ ಜಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರಾದ ರೇಷ್ಮಾ, ಶ್ರಾವ್ಯ, ಸುಪ್ರೀತ ಮತ್ತು ವಿದ್ಯಾಶ್ರೀ ಪ್ರಾರ್ಥನೆಗೈದರು ಹಾಗೂ ವಿದ್ಯಾರ್ಥಿನಿ ಕು.ತನ್ವಿ ಪಿ ಕಾರ್ಯಕ್ರಮ ನಿರೂಪಿಸಿದರು.