ಪುತ್ತೂರು: ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣದಲ್ಲಿ ಜ.14 ರಂದು ಕಾರು ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಈಶ್ವರಮಂಗಲ ಬಂಟಕಲ್ಲು ನಿವಾಸಿ ದೇವಿಪ್ರಸಾದ್ ಶೆಟ್ಟಿ(33) ರವರ ಪತ್ನಿ ಜ.15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟಿದ್ದ ದೇವಿಪ್ರಸಾದ್ ಶೆಟ್ಟಿಯವರ ಮೃತದೇಹವನ್ನು ಜ.14 ರಂದು ರಾತ್ರಿಯೇ ಚೆನ್ನರಾಯಪಟ್ಟಣದಿಂದ ತಂದು, ಮೃತರ ಪತ್ನಿ ಅಕ್ಷತಾ ಹೆರಿಗೆಗಾಗಿ ದಾಖಲಾಗಿದ್ದ ಕೋಟೆಶ್ವರ ಆಸ್ಪತ್ರೆಗೆ ಕೊಂಡೊಯ್ದು ಅವರಿಗೆ ಮುಖದರ್ಶನ ಮಾಡಿಸಲಾಗಿತ್ತು. ಪತಿಯ ಅಕಾಲಿಕ ಸಾವಿನಿಂದಾಗಿ ದುಃಖದ ಮಡುವಿನಲ್ಲಿ ಮುಳುಗಿದ್ದ ಅಕ್ಷತಾ ರವರು ಜ.15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ದೇವಿಪ್ರಸಾದ್ ಶೆಟ್ಟಿ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕಳೆದ ಬಾರಿಯ ಕೋವಿಡ್ ಮಹಾಮಾರಿಯ ಸಂದರ್ಭ ಊರಿಗೆ ಬಂದು ಬಳಿಕ ಬೆಂಗಳೂರಿನಲ್ಲಿ ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿದ್ದ ದೇವಿಪ್ರಸಾದ್ ಶೆಟ್ಟಿಯವರು ಪರೋಪಕಾರಿಯಾಗಿ ಗುರುತಿಸಿಕೊಂಡಿದ್ದರು.ಊರಲ್ಲಿ ಯಾರಿಗಾದರೂ ಅಸೌಖ್ಯವಿದ್ದು ಆರ್ಥಿಕ ಅಡಚಣೆ ಎದುರಾಗಿದ್ದ ಸಂದರ್ಭದಲ್ಲಿ ತನ್ನಿಂದಾದ ಸಹಾಯವನ್ನು ಮಾಡುತ್ತಿದ್ದರು. ಇತ್ತೀಚೆಗಷ್ಟೆ ಅಪಘಾತದಿಂದ ಗಾಯಗೊಂಡಿದ್ದ ಬಡಕುಟುಂಬದ ಯುವಕನೋರ್ವನ ಚಿಕಿತ್ಸೆಗೆಂದು ಆರ್ಥಿಕ ನೆರವು ನೀಡಿದ್ದ ದೇವಿಪ್ರಸಾದ್ ಮುಂದೆಯೂ ಅಗತ್ಯವಿದ್ದಾಗ ಸಾಧ್ಯವಾದರೆ ಕೊಡುವುದಾಗಿ
ವಾಗ್ದಾನ ಮಾಡಿದ್ದರು.
ಅಶಕ್ತರ ನೆರವಿಗೆಂದು ಈಶ್ವರಮಂಗಲದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆ್ಯಂಬುಲೆನ್ಸ್ ಒಂದನ್ನು ಖರೀದಿಮಾಡಿದ್ದ ಸಂದರ್ಭ ದೇವಿಪ್ರಸಾದ್ ಶೆಟ್ಟಿಯವರೂ ಆರ್ಥಿಕ ಸಹಾಯ ಮಾಡಿದ್ದರು. ದುರಾದೃಷ್ಟವೆನ್ನುವಂತೆ ಅದೇ ಆ್ಯಂಬುಲೆನ್ಸ್‌ನಲ್ಲಿಯೇ ಅವರ ಮೃತದೇಹವನ್ನು ಚೆನ್ನರಾಯಪಟ್ಟಣದಿಂದ ಕರೆತರಲಾಯಿತು.
ಚಿಕ್ಕಪುತ್ತೂರು ಹಿಂದೂರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಮಧ್ಯೆ ಈಶ್ವರಮಂಗಲ ಪೇಟೆಯಲ್ಲಿ ಸಾರ್ವಜನಿಕರಿಗೆ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ನೂರಾರು ಮಂದಿ ಮೃತದೇಹದ ಅಂತಿಮ ದರ್ಶನ ಪಡೆದು, ನೆಚ್ಚಿನ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದರು.
ದೇವಿಪ್ರಸಾದ್ಅವರು ಅಪಘಾತಕ್ಕೆ ಬಲಿಯಾಗಿರುವುದರಿಂದ ಈಶ್ವರಮಂಗಲ ಪರಿಸರದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತ ದೇವಿಪ್ರಸಾದ್ ಶೆಟ್ಟಿಯವರು ತಾಯಿ ಸುಮತಿ, ಪತ್ನಿ ಅಕ್ಷತಾ ಹಾಗೂ ನವಜಾತ ಗಂಡು ಮಗುವನ್ನು ಅಗಲಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಮಾರುತಿ ಅಲ್ಟೊ ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ, ಇನ್ಫೋಸಿಸ್ ಉದ್ಯೋಗಿಗಳಾಗಿದ್ದ ದೇವಿಪ್ರಸಾದ್ ಶೆಟ್ಟಿ ಹಾಗೂ ವಿಟ್ಲ ಬಾರಬೆಟ್ಟು ಸುದರ್ಶನ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.ಕಾರಿನ ಹಿಂಬದಿ ಸೀಟಲ್ಲಿದ್ದ ಸರ್ವೆ ಸೊರಕೆ
ನಿವಾಸಿ ಪ್ರಮೋದ್ ಸುವರ್ಣ ಅವರು ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.