ಪುತ್ತೂರು: ಎಸ್.ಡಿ.ಎಂ.ಸಿ. ಸಮಿತಿ ಊರ್ಜಿತ ಇರುವಾಗಲೇ ಪುನಃ ಸಮಿತಿ ರಚನೆಗೆ ನಿರ್ಧರಿಸಿ, ಪಾಣಾಜೆ ಶಾಲಾ ಮುಖ್ಯಶಿಕ್ಷಕರು ಕರೆದಿರುವ ಸಭೆಗೆ ಹೈಕೋರ್ಟ್ ತಡೆಯಾಜ್ಞೆ ತಂದಿರುವ ಘಟನೆ ನಡೆದಿದೆ.
ಪಾಣಾಜೆ ದ.ಕ.ಜಿ.ಪ.ಹಿ.ಪ್ರಾ. ಶಾಲೆಯ ನೂತನ ಎಸ್.ಡಿ.ಎಂ.ಸಿ. ರಚನೆಯ ಬಗ್ಗೆ ವಿದ್ಯಾರ್ಥಿಗಳ ಪೋಷಕರ ಅ.30 ರಂದು ಪಾಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.
ಈ ಸಭೆಯಲ್ಲಿ ಸೇರಿದ್ದ ಪೋಷಕರು ನಿಯಮದಂತೆ ಒಟ್ಟು 18 ಜನರನ್ನು ಎಸ್.ಡಿ.ಎಂ.ಸಿ. ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು. ಆ ಬಳಿಕ ನಡೆದ ಎಸ್.ಡಿ.ಎಂ.ಸಿ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗಿಳಿದ ಕಾರಣ ಚುನಾವಣೆ ನಡೆಸುವುದು ಅನಿವಾರ್ಯವಾಗಿದ್ದು, ಎಸ್.ಡಿ.ಎಂ.ಸಿ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸೀತಾ ಉದಯ ಶಂಕರ ಭಟ್ ಚಂಬರಕಟ್ಟ ಹಾಗೂ ಹಿಂದಿನ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬೂಬಕ್ಕರ್ ಅರ್ಲಪದವು ರವರಿಗೆ ಸಮಾನ ಮತಗಳು ಬಂದ ಕಾರಣ, ಪಂಚಾಯಿತಿ ಅಧ್ಯಕ್ಷರು ಇಬ್ಬರು ಅಭ್ಯರ್ಥಿಗಳ ಹೆಸರಿನ ಚೀಟಿಯನ್ನು ಎತ್ತುವ ಪ್ರಕ್ರಿಯೆ ನಡೆಸಿದರು.
ಚೀಟಿ ಎತ್ತಿದಾಗ ಸೀತಾ ಉದಯಶಂಕರ ಭಟ್ಟರವರ ಹೆಸರು ಬಂದದ್ದರಿಂದ ಸೀತಾ ಉದಯ ಶಂಕರ ಭಟ್ ರವರನ್ನು ಶಾಲೆಯ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿ ಸಭೆಯ ನಡವಳಿಯಲ್ಲಿ ದಾಖಲಿಸಲಾಗಿತ್ತು.
ಸೀತಾ ಉದಯ ಶಂಕರ ಭಟ್ ರವರು ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ತನ್ನ ಶಾಲಾ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು, ಕೆಲವು ದಿನಗಳ ಬಳಿಕ ಅಧ್ಯಕ್ಷರು ಎಸ್.ಡಿ.ಎಂ.ಸಿ. ಸಭೆ ಕರೆಯಬೇಕೆಂದು ಮುಖ್ಯಶಿಕ್ಷಕರಲ್ಲಿ ಹೇಳಿದಾಗ ಎಸ್.ಡಿ.ಎಂ.ಸಿ. ಆಯ್ಕೆ ಬಗ್ಗೆ ತಕರಾರಿದೆ ಈ ಕುರಿತು ಪಂಚಾಯತ್ ನ ಸೂಚನೆ ಬರದೆ ಸಭೆ ಕರೆಯಲು ಸಾಧ್ಯವಿಲ್ಲವೆಂದು ತಿಳಿಸಿದ್ದರು. ಇದರಿಂದ ನೊಂದು ಎಸ್.ಡಿ.ಎಂ.ಸಿ. ರಚನೆಯ ಬಗ್ಗೆ ನಡೆದ ಸಭೆಯ ನಡವಳಿಯ ಪ್ರತಿ ನೀಡಬೇಕೆಂದು ಕೇಳಿ ಕೊಂಡಾಗ, ತನ್ನ ಅರ್ಜಿಯನ್ನೇ ಸ್ವೀಕರಿಸಲು ನಿರಾಕರಿಸಿದ ಮುಖ್ಯಶಿಕ್ಷಕರು ಕರ್ತವ್ಯಲೋಪದ ಕುರಿತು ಸೀತಾ ಉದಯ ಶಂಕರ್ ಭಟ್ ರವರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು. ಬಳಿಕ ಎಸ್.ಡಿ.ಎಂ.ಸಿ. ರಚನೆಯ ಬಗ್ಗೆ ವಿನಾ ಕಾರಣ ಗೊಂದಲ ಮೂಡಿಸುವ ಘಟನೆಯ ಬಗ್ಗೆ ಸ್ಥಳೀಯ ಮುಖಂಡರ ನಿಯೋಗವೊಂದು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿಯಾಗಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.
ಈ ಎಲ್ಲಾ ಬೆಳವಣಿಗೆ ನಡುವೆ ನೂತನವಾಗಿ ಎಸ್.ಡಿ.ಎಂ.ಸಿ. ರಚನೆ ಮಾಡಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷರ ಸೂಚನೆಯಂತೆ ಶಾಲಾ ಮುಖ್ಯಶಿಕ್ಷಕಿ ಶೀಲಾವತಿ ಯವರು ಹೊಸ ಎಸ್ ಡಿ ಎಂ ಸಿ ರಚನೆ ಮಾಡುವ ಕುರಿತು ಜ.14 ರಂದು ಪೋಷಕರ ಸಭೆ ಕರೆದಿದ್ದರು. ಎಸ್ ಡಿ ಎಂ ಸಿ ರಚನೆಯಾಗಿ ಅಧ್ಯಕ್ಷರಾಗಿ ನೇಮಕಗೊಂಡು ಎಸ್ ಡಿ ಎಂ ಸಿ ಸಮಿತಿ ಊರ್ಜಿತದಲ್ಲಿರುವಾಗಲೇ ನಿಯಮಬಾಹಿರವಾಗಿ ಪುನಃ ಎಸ್ ಡಿ ಎಂ ಸಿ ರಚನೆಯ ಬಗ್ಗೆ ಕರೆದಿರುವ ಸಭೆಯು ಕಾನೂನು ಭಾಹಿರವೆಂದು, ಈ ಸಭೆಯನ್ನು ರದ್ದು ಪಡಿಸಬೇಕೆಂದು. ಈ ರೀತಿ ಕಾನೂನು ಭಾಹಿರವಾಗಿ ಸಭೆ ಕರೆದಿರುವವರ ಹಾಗೂ ಇದಕ್ಕೆ ಕಾರಣಕರ್ತರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಸೀತಾ ಉದಯ ಶಂಕರ ಭಟ್ ರವರು ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಇವರ ಈ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಉಚ್ಚ ನ್ಯಾಯಾಲಯವು ಜ.14 ರ ಎಸ್ ಡಿ ಎಂ ಸಿ ರಚನೆ ಸಭೆಗೆ ತಡೆಯಾಜ್ಞೆ ನೀಡಿರುತ್ತದೆ.
ಹೈ ಕೋರ್ಟ್ ನಲ್ಲಿ ಸೀತಾ ಭಟ್ ರವರ ಪರವಾಗಿ ಖ್ಯಾತ ನ್ಯಾಯವಾದಿ ಲತೀಫ್ ಬಡಗನ್ನೂರು ರವರು ವಾದಿಸಿದ್ದರು.