ವಿಟ್ಲ: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ನೋಡಲು ಬಂದ ಯುವಕ ಮತ್ತು ಆತನ ಸ್ನೇಹಿತನಿಗೆ ಯುವತಿಯ ತಂದೆ, ಅಣ್ಣ ಮತ್ತು ಸಂಬಂಧಿಕರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಠಾಣೆಗೆ ದೂರು ನೀಡಿದ ಘಟನೆ ವಿಟ್ಲದ ಹೇಮಾಜೆಯಲ್ಲಿ ನಡೆದಿದೆ.
ಕೋಲ್ಪೆ ಸಮೀಪದ ಯುವಕ ಮತ್ತು ಆತನ ಸ್ನೇಹಿತನ ಜೊತೆ ವಿಟ್ಲ ಹೇಮಾಜೆ ಸಮೀಪದ ತನ್ನ ಪ್ರಿಯತಮೆ ಮನೆಗೆ ಮಾತನಾಡಿಸಲು ಬಂದಿದ್ದು, ಆ ವೇಳೆ ಆಕೆಯ ಮನೆಯವರು ತಡೆಗಟ್ಟಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ.
ಹಲ್ಲೆಯ ಸಂದರ್ಭ ಯುವಕನ ಸ್ನೇಹಿತ ಯುವತಿಯ ಮನೆಯವರ ಕೈಗೆ ಸಿಕ್ಕಿ ಬಿದ್ದಿದ್ದು, ಆತನಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ 112 ಸಿಬ್ಬಂದಿ ಆತನನ್ನು ಠಾಣೆಗೆ ಕರೆದೊಯ್ಯಿದಿದ್ದು, ಬಳಿಕ ಆತ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.
ಆಸ್ಪತ್ರೆಗೆ ದಾಖಲಾದ ಆಶಿಕ್(23 ವ.) ಹೇಳಿಕೆ ಪ್ರಕಾರ, ‘ನನ್ನ ಸ್ನೇಹಿತ ಸಮೀರ್ ನೊಂದಿಗೆ, ನಾನು ಹೇಮಾಜೆ ಹತ್ತಿರ ಹೋದಾಗ, ಬೊಲೆರೋ ವಾಹನದಲ್ಲಿ ಬಂದ ಕೆಲವರು ಅಡ್ಡ ಹಾಕಿ ನನ್ನ ಗಾಡಿಯ ಕೀ, ಮೊಬೈಲ್ ತೆಗೆದುಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದಿದ್ದಾನೆ.
ಇನ್ನೂ ಸಮೀರ್(22 ವ.) ‘ನಾನು ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಯ ಮನೆಯಲ್ಲಿ ಒಪ್ಪಿಗೆ ನೀಡುತ್ತಿರಲಿಲ್ಲ, ಎರಡು ವರ್ಷದ ನಂತರ ಬಂದು ಕೇಳುವಂತೆ ಹೇಳಿದ್ದು, ನಾನು ಕೆಲಸದ ಮೇರೆಗೆ ಬೇರೆ ಕಡೆಗೆ ತೆರಳುತ್ತಿದ್ದು, ಈ ಹಿನ್ನೆಲೆ ಯುವತಿ ಮನೆಗೆ ತೆರಳಿ ಆಕೆಯ ಮನೆಯವರ ಬಳಿ ಮದುವೆ ವಿಷಯ ಮಾತನಾಡಲು ತೆರಳಿದ್ದೆ ಆ ಸಂದರ್ಭದಲ್ಲಿ ಆಕೆಯ ಮನೆಯವರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾನೆ ತಿಳಿದು ಬಂದಿದೆ.