ಉಪ್ಪಿನಂಗಡಿ: ಗಣರಾಜ್ಯೋತ್ಸವಕ್ಕೆ ಕೇರಳ ಸರ್ಕಾರ ಕಳುಹಿಸಿದ್ದ ನಾರಾಯಣ ಗುರು ಸ್ತಬ್ದಚಿತ್ರ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದಕ್ಕಾಗಿ ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.
ಈ ಬಗ್ಗೆ ಮಾತನಾಡಿದ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜರಾಮ್ ರವರು, “ಸಮಾಜ ಸುಧಾರಕ, ಹಿಂದೂ ಧರ್ಮದ ರಕ್ಷಕ ಸರ್ವ ಜನರಿಂದಲೂ ಗೌರವಿಸಲ್ಪಡುವ ಮಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಪ್ರತಿಮೆ ಹೊಂದಿದ ಗಣರಾಜ್ಯೋತ್ಸವ ಪರೇಡಿಗಾಗಿ ಕೇರಳ ಸರಕಾರ ನಿರ್ಮಾಣ ಮಾಡಿದ ಸ್ತಬ್ದ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ನಮಗೆ ದಿಗ್ರಮೆ ಮತ್ತು ಅತ್ಯಂತ ನೋವುಂಟು ಮಾಡಿದೆ.
ಇದು ಜಾತಿ ಧರ್ಮದ ಮಿತಿಯನ್ನು ಮೀರಿ ಸಮಸ್ತ ನಾರಾಯಣ ಗುರು ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಕೇಂದ್ರ ಸರಕಾರವು ತನ್ನ ಈ ನಿರ್ಧಾರವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇವೆ” ಎಂದರು.
“ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶದ ನಾನಾ ಕಡೆಗಳಲ್ಲಿ ಗುರುಗಳನ್ನು ದೇವರೆಂದೇ ಪೂಜಿಸುವ ದೊಡ್ಡ ಜನಸಮೂಹವಿದ್ದು, ಸರಕಾರವು ಗುರುಗಳ ಪ್ರತಿಮೆ ಬದಲಾವಣೆ ಮಾಡಲು ತಿಳಿಸುವ ಮೂಲಕ ಜನಸಮೂಹಕ್ಕೆ ನಿರಾಸೆ ಮತ್ತು ದುಃಖ ಉಂಟುಮಾಡಿದಲ್ಲದೆ, ಅಗೌರವ ತೋರಿಸಿದೆ.
ಕೇರಳ ಸರಕಾರವು ಜಟಾಯುಪಾರ ದ್ವಾರದ ಮಾದರಿಯ ಸ್ತಬ್ಧಚಿತ್ರದ ಮುಂಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪ್ರತಿಮೆ ಇರಿಸಿ ಸಿದ್ಧಪಡಿಸಲಾಗಿತ್ತು. ಆದರೆ, ರಕ್ಷಣಾ ಇಲಾಖೆಯು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಪ್ರದರ್ಶನಕ್ಕೆ ನಿರಾಕರಿಸಿರುವುದು ಸರಿಯಾದ ಕ್ರಮವಲ್ಲ, ಕೇರಳ ರಾಜ್ಯಾದಾದ್ಯಂತ ಗುರುದೇವ ಎಂದೇ ಜನಪ್ರಿಯರಾಗಿರುವ ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿ ಸಮಾಜದಲ್ಲಿದ್ದ ಅಸಮಾತೆಯನ್ನು ಹೋಗಲಾಡಿಸಲು ತಮ್ಮದೇ ಆದ ವಿಶಿಷ್ಟ ಕ್ರಮಗಳ ಮೂಲಕ ಹೋರಾಟ ನಡೆಸಿ ಸಮಾಜದ ಎಲ್ಲ ಸ್ತರದ ಜನರಿಗೂ ಗೌರವ, ಸಮಾನತೆ ತಂದುಕೊಟ್ಟವರು.
ಅ ಸಮಾನತೆಯ ನೀತಿಗಳಿಂದ ಹರಿದು ಹಂಚಿ ಹೋಗ ಬಹುದಾಗಿದ್ದ ಧರ್ಮವನ್ನು ಸಂರಕ್ಷಿಸಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂಬುದನ್ನು ತಾವು ಮೊದಲಾಗಿ ಮನಗಾಣಬೇಕು. ವಿದ್ಯೆ ಮತ್ತು ಸಂಘಟನೆಯ ಮಹತ್ವವನ್ನು ತಿಳಿಸಿಕೊಟ್ಟ ಮಹಾನ್ ಪುರುಷನ ಕೊಡುಗೆಯನ್ನು ಪ್ರಜಾಪ್ರಭುತ್ವ ಸರಕಾರ ಕಡೆಗಣಿಸಿರುವುದು ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಆದುದರಿಂದ ಕೇಂದ್ರ ಸರಕಾರ ತನ್ನ ಕ್ರಮವನ್ನು ಮರುಪರಿಶೀಲಿಸಿ ಗುರುಗಳ ಪ್ರತಿಮೆಯಿರುವ ಸ್ತಬ್ದಚಿತ್ರಕ್ಕೆ ಗಣರಾಜ್ಯೋತ್ಸವ ಪರೇಡಿನಲ್ಲಿ, ಭಾಗವಹಿಸಲು ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುರಳೀಧರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ರಮಾನಾಥ ವಿಟ್ಲ, ಎಂ.ಎಸ್. ಮಹಮ್ಮದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.