ಮಂಗಳೂರು: ವಯೋಸಹಜ ಅಸ್ವಸ್ಥತೆಯ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯನ್ನು ಅವರು ಇನ್ನು ಹೆಚ್ಚು ಸಮಯ ಬದುಕಲಾರರು ಎಂದು ವೈದ್ಯರು ಹೇಳಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಆ ವ್ಯಕ್ತಿ ಎದ್ದು ಕುಳಿತು ಕಣ್ಣು ತೆರೆದ ಘಟನೆ ನಡೆದಿದೆ.
ಕಾಸರಗೋಡಿನ ಬದಿಯಡ್ಕ ಸಮೀಪದ ವಾಂತಿಚ್ಚಾಲಿನ ವಯೋ ವೃದ್ಧರನ್ನು ಚಿಕಿತ್ಸೆಗಾಗಿ ಸೋಮವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನು ಬುಧವಾರ ಡಿಸ್ಚಾರ್ಜ್ ಮಾಡಲಾಗಿತ್ತು. ವ್ಯಕ್ತಿ ಹೆಚ್ಚು ಸಮಯ ಬದುಕಲಾರರು ಎಂದು ವೈದ್ಯರು ಹೇಳಿದ್ದರಿಂದ ಮನೆಗೆ ತಲಪುವಷ್ಟರಲ್ಲಿ ಸಾವನ್ನಪ್ಪುತ್ತಾರೆ ಎಂದು ತಪ್ಪಾಗಿ ಗ್ರಹಿಸಿದ ಮನೆ ಮಂದಿ ಮಂಗಳೂರಿನಿಂದ ಹೊರಡುವಾಗ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಂತೆ ಕುಟುಂಬಸ್ಥರಿಗೆ ತಿಳಿಸಿದ್ದರು.
ಆದರೆ ಆ್ಯಂಬುಲೆನ್ಸ್ ಉಪ್ಪಳ ತಲಪುವಷ್ಟರಲ್ಲಿ ಅಸ್ವಸ್ಥ ರೋಗಿ ಬೆಡ್‌ನಿಂದ ಎದ್ದು ಕುಳಿತಿದ್ದಾರೆ. ಬಳಿಕ ಬದಿಯಡ್ಕ ತಲುಪಿ ಅಲ್ಲಿನ ಆಸ್ಪತ್ರೆಗೆ ಕೊಂಡೊಯ್ದು ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಅದರಂತೆ ಇದೀಗ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸುತ್ತಿದ್ದಾರೆ ಎನ್ನಲಾಗಿದೆ.