ವಿಟ್ಲ: ಪಟ್ಟಣ ಪಂಚಾಯತ್ ನಲ್ಲಿ ಲಂಚಾವತಾರ ಮತ್ತು ನಾಲ್ಕು ದಿನಗಳ ಹಿಂದೆ ನಡೆದ ಸಿಬ್ಬಂದಿ ಆತ್ಮಹತ್ಯೆ ಯತ್ನದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಧ್ಯೆ ಪ್ರವೇಶಿಸಿ, ಸಮಗ್ರ ತನಿಖೆ ನಡೆಸಬೇಕು. ಇದು ಬಿಜೆಪಿಯ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಸಮರವೇ..? ಪಟ್ಟಣ ಪಂಚಾಯತ್‌ನ ಲಂಚಾವತಾರದಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳಕ್ಕೆ ಪರಿಹಾರ ಏನು ಇತ್ಯಾದಿ ವಿಚಾರಗಳ ಬಗ್ಗೆ ವಿಟ್ಲದ ಜನತೆ ಸತ್ಯಾಂಶವನ್ನು ತಿಳಿದುಕೊಳ್ಳಬೇಕಾಗಿದೆ ಎಂದು ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ರವರು ಆಗ್ರಹಿಸಿದ್ದಾರೆ.
ಪಟ್ಟಣ ಪಂಚಾಯಿತಿಯಲ್ಲಿ ಲಂಚಾವತಾರ ಅತಿಯಾಗಿದೆ. ಇದನ್ನು ಸರಿಪಡಿಸಲು ಯಾವುದೇ ಜನಪ್ರತಿನಿಧಿಗಳಿಂದ ಸಾಧ್ಯವಾಗುತ್ತಿಲ್ಲ. ಮನೆ ಭೇಟಿಯ ಸಂದರ್ಭ ಹಣಕ್ಕಾಗಿ ಪೀಡಿಸುವ ನೌಕರರ ವಿರುದ್ಧ ವ್ಯಕ್ತಿಯೋರ್ವರು ದೂರು ನೀಡಿದ ಬಳಿಕ ಆತ್ಮಹತ್ಯೆ ಯತ್ನವೂ ನಡೆದಿದೆ.
ಪಂಚಾಯಿತಿ ನೌಕರರು ಹಣ ಕೊಡದೇ ಯಾವುದೇ ಕೆಲಸ ಮಾಡಿಕೊಡುವುದಿಲ್ಲ. ಪೌರ ಕಾರ್ಮಿಕರನ್ನು ಪಂಚಾಯಿತಿ ಕೆಲಸಕ್ಕೆ ನಿಯೋಜಿಸಿ, ಅದರಲ್ಲಿ ಒಬ್ಬರಿಗೆ ಕಂದಾಯ ಇಲಾಖೆಯ ಜವಾಬ್ದಾರಿಯನ್ನು ನೀಡಿರುವುದು ಖಂಡನೀಯವಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಶಾಸಕರು ಕ್ರಮಕೈಗೊಳ್ಳಬೇಕು ಎಂದು ರಮಾನಾಥ ವಿಟ್ಲ ಆಗ್ರಹಿಸಿದ್ದಾರೆ.