ಪುತ್ತೂರು: ಸಮಾನತೆಯ ದೃಷ್ಟಿಯಿಂದ ಮಹಿಳೆಯೂ ಎಲ್ಲರಂತೆ ಜೀವಿಸಲು ಸಾಧ್ಯವಾಗಬೇಕು. ಸಂಕಷ್ಟ ಪರಿಸ್ಥಿತಿಯಲ್ಲಿ ಆಸ್ತಿಯ ಹಕ್ಕು ಆಕೆಯ ನೆರವಿಗೆ ಬರಬೇಕು. ಬೀದಿಗೆ ಬಂದ ಮಹಿಳೆ ಸಾವಿನ ಮನೆಗೆ ಹೋಗಬಾರದು ಎಂಬ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಸ್ತಿಯ ಹಕ್ಕಿನ ಅವಕಾಶ ಕಲ್ಪಿಸಲಾಯಿತು ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕಿ ಡಾ. ರೇಖಾ ಕೆ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಭಾರತದಲ್ಲಿ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೂ ಸಹ ಪುರುಷರಷ್ಟೇ ಸಮಾನ ಹಕ್ಕಿದೆ. ಅದು ತೆರಿಗೆ ವಿಷಯದಲ್ಲಾಗಲಿ ಅಥವಾ ಆನುವಂಶಿಕತೆಯ ಕಾನೂನು ಸಮಸ್ಯೆಯಲ್ಲಾಗಲಿ ಮಹಿಳೆಯರ ಹಕ್ಕನ್ನು ರಕ್ಷಿಸಿರುವುದಲ್ಲದೇ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡಿದೆ. ಕಾನೂನು ಮಾಹಿತಿ ಇದ್ದರೆ ಯೋಗ್ಯ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಪೂರ್ಣವಾದ ಕಾನೂನಿನ ಅರಿವು ಪಡೆಯಲು ಸಾಧ್ಯವಿಲ್ಲ.
ಆದರೂ ಕನಿಷ್ಠ ಪ್ರತಿ ದಿನಕ್ಕೆ ಅನಿವಾರ್ಯವಾಗಿರುವ ವಿಷಯ ತಿಳಿದಿರಬೇಕಾಗಿರುವುದು ಅವಶ್ಯಕ ಎಂದರು.ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಪ್ರೊ. ಸುಭಾಷಿಣಿ ಜೆ ಗ್ರಾಹಕರ ಹಕ್ಕು ಎಂಬ ವಿಷಯದ ಕುರಿತು ಮಾತನಾಡಿ ಗ್ರಾಹಕರ ಸಂರಕ್ಷಣೆ ಕಾಯ್ದೆಯ ಪ್ರಕಾರವಾಗಿ ಗ್ರಾಹಕನೂ ಕೆಲವೊಂದು ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾನೆ. ಸುರಕ್ಷತೆ ಹಕ್ಕು, ಮಾಹಿತಿ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ನಿವಾರಿಸುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು. ಆರು ಗ್ರಾಹಕರ ಹಕ್ಕುಗಳ ಅನ್ವಯ ಗ್ರಾಹಕನು ಮಾರುಕಟ್ಟೆಯಲ್ಲಿ ತನ್ನ ಸರಕಿನ ಮೇಲೆ ಮೋಸ, ವಂಚನೆ ಕಂಡುಬಂದರೆ ಗ್ರಾಹಕ ಸಂರಕ್ಷಣೆ ಕಾಯ್ದೆ ಪ್ರಕಾರವಾಗಿ ಗ್ರಾಹಕ ನ್ಯಾಯಲಯಗಳಿಗೆ ದೂರು ಸಲ್ಲಿಸಿ, ಪರಿಹಾರವನ್ನು ಪಡೆಯಬಹುದು ಎಂದರು.ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಕೌಶಿಕ್ ಸಿ, ಕುಮಾರ್ ಎಸ್, ಸಂಗೀತ ಎಸ್. ಎಂ ಉಪಸ್ಥಿತರಿದ್ದರು.ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ದೇವಿಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಾ ಕೆ ವಂದಿಸಿದರು.