ಬೆಳ್ತಂಗಡಿ: ಉಡುಪಿ ವಲಯದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯೊಬ್ಬರನ್ನು ಬೀದರ್‌ಗೆ ವರ್ಗಾವಣೆ ಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ಮಹಿಳಾ ಅಧಿಕಾರಿಯನ್ನು ಪ್ರಸ್ತುತ ಇರುವ ಸ್ಥಳದಲ್ಲೇ ಕರ್ತವ್ಯದಲ್ಲಿ ಮುಂದುವರೆಯುವಂತೆ ಹಿರಿಯ ಅರಣ್ಯಾ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದು, ಸರ್ಕಾರದಿಂದ ಅಧಿಕೃತವಾದ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿದು ಬಂದಿದೆ.
ಮಹಿಳಾ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರನ್ನು ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕೆಲವು ಸಂಘಟನೆಗಳೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದವು.
ಇನ್ನು ಬೆಳ್ತಂಗಡಿಯ ಅಕ್ರಮ ಮರ ಸಾಗಾಟಗಾರರ ಮರಮಟ್ಟು, ವಾಹನ ವಶಪಡಿಸಿಕೊಂಡ ಕಾರಣ ಶಾಸಕರು ಕೋಪಗೊಂಡು ನನ್ನಲ್ಲಿ ವೈಯಕ್ತಿಕ ದ್ವೇಷ ಹಗೆತನ ಸಾಧಿಸಿದ್ದಾರೆ ಎಂದು ಸಂಧ್ಯಾ ಸಚಿನ್ ಆರೋಪಿದ್ದರು.
ಇತ್ತೀಚೆಗಷ್ಟೇ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಬಿಲ್ಲವ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಮತ್ತೆ ಈ ವಿಚಾರದಿಂದ ಕರಾವಳಿ ಕರ್ನಾಟಕದಾದ್ಯಂತ ಅತಿಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವ ಸಮುದಾಯವನ್ನು ಎದುರು ಹಾಕಿಕೊಳ್ಳುವುದು ರಾಜಕೀಯವಾಗಿ ಹಿನ್ನಡೆಯಾಗುವ ಸಾಧ್ಯತೆ ಇರುವುದರಿಂದ ಸದ್ಯ ಸರ್ಕಾರ ಸಂಧ್ಯಾ ಅವರನ್ನು ವರ್ಗಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.