ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ವಾಣಿಜ್ಯ ಸಂಘದ ವತಿಯಿಂದ ಭಾರತ ಸರಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ 2022-23 ಇದರ ನೇರ ವೀಕ್ಷಣೆ ಹಾಗೂ ವಿಶ್ಲೇಷಣಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ. ದಾಮೋದರ ಕಣಜಾಲು ಇವರು ಉಪಸ್ಥಿತರಿದ್ದು, ಬಜೆಟ್ ಎನ್ನುವುದು ಭಾರತದ ಪ್ರತಿಯೊಂದು ಪ್ರಜೆಗಳಿಗೂ ಅಗತ್ಯವಾದಂತಹ ವಿಷಯವಾಗಿದೆ, ವಿದ್ಯಾರ್ಥಿ ಜೀವನದಲ್ಲಿ ಇದರ ವೀಕ್ಷಣೆ ಮಾಡುವ ಮೂಲಕ ಬಜೆಟ್ ನ ಬಗ್ಗೆ ವಿಶ್ಲೇಷಣೆ ಮಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಐಕ್ಯೂಎಸಿ ಸಂಚಾಲಕರು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಹರಿಪ್ರಸಾದ್ ಇವರು ಮಾತನಾಡುತ್ತಾ ಬಜೆಟನ್ನು ವೀಕ್ಷಣೆ ಮಾಡುವ ಮೂಲಕ ವಿದ್ಯಾರ್ಥಿಗಳು ಅದರ ಮಹತ್ವ ಮತ್ತು ಆರ್ಥಿಕತೆಯ ಮೇಲೆ ಆಗುವ ಪರಿಣಾಮಗಳನ್ನು ವಿಸ್ಕೃತವಾಗಿ ಚರ್ಚಿಸುವಂತಾಗಬೇಕು ಎಂದು ಹೇಳಿದರು.
ವಾಣಿಜ್ಯ ಸಂಘದ ಸಂಚಾಲಕರಾದ ಪ್ರೊ.ದೀಕ್ಷಿತ್ ಕುಮಾರ್ ವಂದಿಸಿದರು. ವಿದ್ಯಾರ್ಥಿಗಳಿಂದ ಬಜೆಟ್ ವೀಕ್ಷಣಾ ಕಾರ್ಯಕ್ರಮವು ನಡೆಯಿತು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ಪದಾಧಿಕಾರಿಗಳಾದ ಪುನೀತ್ ಕುಮಾರ್ ಕೆ ವಿ, ಚೈತ್ರ ಬಿ, ಧನುಶ್ರೀ ರೈ ಬಿ ಉಪಸ್ಥಿತರಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು.































