ಬಂಟ್ವಾಳ: ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ಗ್ರಾ.ಪಂ.ಗಳನ್ನು ಒಳಗೊಂಡು ಹಿರಿದಾದ ತಾಲೂಕು ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿರುವ ಬಂಟ್ವಾಳ ತಾಲೂಕು ಇದೀಗ ಉಳ್ಳಾಲ ತಾಲೂಕು ಅಧಿಕೃತ ಘೋಷಣೆಯ ಮೂಲಕ ಕಿರಿದಾಗುತ್ತಿದೆ.
ಬಂಟ್ವಾಳದ ಒಟ್ಟು 9 ಗ್ರಾಮಗಳು ಶೀಘ್ರದಲ್ಲಿ ಕೈ ತಪ್ಪಲಿದೆ. ಬಂಟ್ವಾಳ ತಾಲೂಕು ಒಟ್ಟು 58 ಗ್ರಾ.ಪಂ.ಗಳನ್ನು ಒಳಗೊಂಡಿದ್ದು ಅದರಲ್ಲಿ ಒಟ್ಟು 7 ಗ್ರಾ.ಪಂ.(9 ಗ್ರಾಮಗಳು) ಉಳ್ಳಾಲ ತಾಲೂಕಿಗೆ ಸೇರ್ಪಡೆಯಾಗಲಿವೆ.
ಹೀಗಾಗಿ ಮುಂದೆ ಬಂಟ್ವಾಳಕ್ಕೆ ಒಟ್ಟು 51 ಗ್ರಾ.ಪಂ.ಗಳು ಉಳಿಯಲಿದ್ದು, ಆದರೂ ಜಿಲ್ಲೆಯಲ್ಲಿ ಗರಿಷ್ಠ ಗ್ರಾ.ಪಂ. ಗಳನ್ನು ಒಳಗೊಂಡಿರುವ ತಾಲೂಕು ಎಂಬ ಹೆಗ್ಗಳಿಕೆಗೆ ಧಕ್ಕೆಯಾಗುವುದಿಲ್ಲ. ಉಳ್ಳಾಲ ತಾಲೂಕು ಹಿಂದೆಯೇ
ಘೋಷಣೆಯಾಗಿದ್ದರೂ, ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟ ಗ್ರಾಮಗಳ ಕೆಲಸಗಳು ಬಂಟ್ವಾಳದಲ್ಲೇ ನಡೆಯುತ್ತಿದ್ದವು. ಜ. 31ರಂದು ಶಾಸಕ ಯು.ಟಿ.ಖಾದರ್ ಉಳ್ಳಾಲ ತಾಲೂಕು ಕಚೇರಿಯ ಪ್ರಾರಂಭಿಕ ಕೆಲಸಕ್ಕೆ ಚಾಲನೆ ನೀಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಉಳ್ಳಾಲ ತಾಲೂಕು ವ್ಯಾಪ್ತಿಯ ಜಾಗಗಳ ದಾಖಲೆಗಳನ್ನೊಳಗೊಂಡ ಭೂಮಿ ಆನ್‌ಲೈನ್ ಕೆಲಸ ಬಹುತೇಕ ಬಂಟ್ವಾಳದಲ್ಲಿ ಸ್ಥಗಿತಗೊಂಡಿದೆ. ಆದರೆ ಅರ್ಜಿಗಳನ್ನು ಸ್ವೀಕರಿಸುವ
ಅಟಲ್ ಜನಸ್ನೇಹಿ ಕೇಂದ್ರ(ಎಜೆಎಸ್‌ಕೆ)ದ ಕೆಲಸಗಳು ಸದ್ಯಕ್ಕೆ ಬಂಟ್ವಾಳದಲ್ಲೇ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅದು ಕೂಡ ಉಳ್ಳಾಲಕ್ಕೆ ಶಿಫ್ಟ್ ಆಗಲಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಬಂಟ್ವಾಳದೊಂದಿಗೆ ಸಂಬಂಧವನ್ನು ಹೊಂದಿದೆ. ಈ ರೀತಿ ಜಿಲ್ಲೆಯ ಯಾವ ತಾಲೂಕುಗಳು ಕೂಡ ಮೂರು ಕ್ಷೇತ್ರಗಳಿಗೆ ಸಂಬಂಧವನ್ನು ಹೊಂದಿಲ್ಲ. ಬಂಟ್ವಾಳದ 39 ಗ್ರಾಮ ಪಂಚಾಯತ್‌ಗಳು ಬಂಟ್ವಾಳ, 10 ಗ್ರಾ.ಪಂ.ಗಳು ಮಂಗಳೂರು ಹಾಗೂ 9 ಗ್ರಾ.ಪಂ.ಗಳು ಉಳ್ಳಾಲಕ್ಕೆ ಸೇರಿವೆ.
ಯಾವ ಗ್ರಾಮ ಎಲ್ಲಿಗೆ.. ?
ಈ ತನಕ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿದ್ದ ಬಾಳೆಪುಣಿ, ಕೈರಂಗಳ, ಇರಾ, ಕುರ್ನಾಡು, ನರಿಂಗಾನ, ಫಜೀರು, ಸಜಿಪನಡು, ಸಜೀಪಪಡು ಹಾಗೂ ಚೇಳೂರು ಸೇರಿ ಒಟ್ಟು 9 ಗ್ರಾಮಗಳು ಉಳ್ಳಾಲಕ್ಕೆ ಸೇರ್ಪಡೆಯಾಗಲಿದೆ.
ಇದರಲ್ಲಿ ಬಾಳೆಪುಣಿ ಹಾಗೂ ಕೈರಂಗಳ ಸೇರಿ ಒಂದು ಗ್ರಾ.ಪಂ., ಸಜೀಪಪಡು ಹಾಗೂ ಚೇಳೂರು ಸೇರಿ ಒಂದು ಗ್ರಾ.ಪಂ. ಹೀಗೆ ಒಟ್ಟು 7 ಗ್ರಾ.ಪಂ.ಗಳು ಮುಂದೆ ಬಂಟ್ವಾಳದಲ್ಲಿ ಇರುವುದಿಲ್ಲ. ಪ್ರಸ್ತುತ ಮಂಗಳೂರು ಕ್ಷೇತ್ರದ 7 ಗ್ರಾ.ಪಂ.ಗಳು ಉಳ್ಳಾಲಕ್ಕೆ ಸೇರಿದರೂ, ತುಂಬೆ, ಮೇರಮಜಲು ಹಾಗೂ ಪುದು ಈ ಮೂರು ಗ್ರಾ.ಪಂ.ಗಳು ಬಂಟ್ವಾಳದಲ್ಲೇ ಉಳಿದುಕೊಳ್ಳಲಿವೆ
ಈ ಹಿಂದೆ ಈ ಗ್ರಾ.ಪಂ.ಗಳು ಉಳ್ಳಾಲ ತಾಲೂಕಿಗೆ ಸೇರ್ಪಡೆಯ ಪ್ರಸ್ತಾವವಿದ್ದರೂ, ಸ್ಥಳೀಯರಿಂದ ವಿರೋಧಗಳು ಬಂದ ಕಾರಣ ಅದನ್ನು ಕೈ ಬಿಡಲಾಗಿತ್ತು. ಸಜಿಪನಡು ಗ್ರಾ.ಪಂ.ಉಳ್ಳಾಲ ಸೇರಲು ವಿರೋಧ ವ್ಯಕ್ತಪಡಿಸಿದರೂ, ಅದು ಮಾತ್ರ ಉಳ್ಳಾಲಕ್ಕೆ ಸೇರಿದೆ.
ಹಂತ ಹಂತವಾಗಿ ಶಿಫ್ಟ್:
ಉಳ್ಳಾಲ ತಾಲೂಕಿಗೆ ಸೇರ್ಪಡೆಯಾಗಲಿರುವ ಬಂಟ್ವಾಳ ತಾಲೂಕಿನ 9 ಗ್ರಾಮಗಳ ದಾಖಲೆ ಪತ್ರಗಳ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಂಟ್ವಾಳ ತಹಶೀಲ್ದಾರರು ತಿಳಿಸಿದ್ದಾರೆ.
ಸದ್ಯಕ್ಕೆ 9 ಗ್ರಾಮಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದರೂ ಅರ್ಜಿ ಸಂಬಂಧಿಸಿದ ಕೆಲಸಗಳು ಬಂಟ್ವಾಳ ತಾಲೂಕು ಕಛೇರಿಯಲ್ಲೇ ಸ್ವೀಕೃತವಾಗುತ್ತಿವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳ್ಳಾಲ ತಾಲೂಕಿಗೆ ವರ್ಗಾವಣೆ ಆಗಲಿವೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.