ಪುತ್ತೂರು: ಮುಕ್ರಂಪಾಡಿಯ ಸುಭದ್ರ ಸಭಾ ಮಂದಿರದ ಬಳಿಯ ಅಶ್ವತ್ಥಕಟ್ಟೆಯಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸುವರ್ಣ ಸಂಭ್ರಮದ ಅಂಗವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಾಣ ಪೂಜೆ, ಅರ್ಧಏಕಾಹ ಭಜನೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ ಫೆ.5,6 ರಂದು ನಡೆಯಿತು.
ಭಗವಂತ ಪ್ರಾಪ್ತಿದಾಯಕ ನಮಗೆಂದು ಕಷ್ಟವನ್ನು ಕರುಣಿಸುವುದಿಲ್ಲ. ಪ್ರಕೃತಿಯ ನಿಯಮದಲ್ಲಿ ಯಾವುದೇ ಜಾತಿ,ಧರ್ಮ ಬೇಧವಿಲ್ಲ. ನಾವು ಜಾತಿ ಕಟ್ಟಪಾಡುಗಳಿಂದ ಹೊರಬಂದು ನೀತಿ ಕಟ್ಟುಪಾಡುಗಳನ್ನು ಅಳವಡಿಸಿಕೊಂಡಾಗ ದೇಶವು ಸಮೃದ್ಧವಾಗಲು ಸಾಧ್ಯ ಎಂದು ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮಿಜಿಯವರು ಹೇಳಿದರು.
ಮುಕ್ರಂಪಾಡಿಯ ಸುಭದ್ರ ಸಭಾ ಮಂದಿರದ ಬಳಿಯ ಅಶ್ವತ್ಥಕಟ್ಟೆಯಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸುವರ್ಣ ಸಂಭ್ರಮದ ಸಾರ್ವಜನಿಕ ಶ್ರೀ ಸತ್ಯನಾರಾಯಾಣ ಪೂಜೆಯ ಎರಡನೇ ದಿನವಾದ ಫೆ.6 ರಂದು ಅರ್ಧಏಕಾಹ ಭಜನೆ, ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ಚನ ನೀಡಿದರು.
ಯಾವುದೇ ರೀತಿಯ ಪೂಜೆ ಆರಾಧನೆಗಳ ಮಹತ್ವ ತಿಳಿದು ಸಲ್ಲಿಸುವ ಸೇವೆ ಪ್ರಾಪ್ತಿಯಾಗಲಿದೆ. ಹೀಗಾಗಿ ಅವುಗಳ ಮಹತ್ವ ತಿಳಿದುಕೊಳ್ಳಬೇಕಾದ ಆವಶ್ಯಕತೆಯಿದೆ. ಆರಾಧನೆಯ ಮಹತ್ವ ನಮ್ಮಮನಸ್ಸಿನಲ್ಲಿ ಅಂತರ್ಗತವಾಗಿರಬೇಕು. ದೇವತಾನುಗ್ರಹ ಪಡೆಯುವ ಮನಸ್ಥಿತಿ ನಮ್ಮಲ್ಲಿರಬೇಕು. ಪ್ರೀತಿ, ಬಾಂಧವ್ಯಗಳು ಸಮಾಜದಲ್ಲಿ ಶಾಶ್ವತವಾಗಿದ್ದು ನಾವು ಪರಸ್ಪರ ಪ್ರೀತಿಯ ಬಾಂಧವ್ಯ, ಐಕ್ಯಮತ್ಯದ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಮಾಜ ಬಹಳಷ್ಟು ಮುಂದುವರಿದಿದೆ. ಆದರೂ ಕೆಲವೊಂದು ಬುದ್ದಿ ಜೀವಿಗಳು ಮಾತ್ರ ನಮ್ಮನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಅದಕ್ಕೆ ಕಿವಿ ಕೊಡದೆ ನಾವು ಸನಾತನವಾದ ಹಿಂದು ಧರ್ಮವನ್ನು ಉಳಿಸುವ ಕಾರ್ಯವಾಗಬೇಕು ಇದಕ್ಕಾಗಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯ ಮನೆಯಿಂದ ಪ್ರಾರಂಭವಾಗಬೇಕು ಎಂದರು.
ಮುಖ್ಯ ಅತಿಥಿಗಳಾದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ವಿವಿಧ ಜಾತಿ ಪಂಗಡಗಳಿದ್ದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು. ಭಕ್ತಿಯಿಂದ ಸಲ್ಲಿಸುವ ಸೇವೆಗೆ ಸತ್ಯನಾರಾಯಣ ಸ್ವಾಮಿ ಶೀಘ್ರ ಪ್ರಾಪ್ತಿಯಾಗುತ್ತದೆ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸುವರ್ಣ ಸಂಭ್ರಮದ ಸತ್ಯನಾರಾಯಣ ಪೂಜೆಯು ದೇವಸ್ಥಾನದ ಬ್ರಹ್ಮಕಲಶೋತ್ಸವ ರೀತಿಯಲ್ಲಿ ಕಾರ್ಯಕ್ರಮ ನಡೆದಿರುತ್ತದೆ. ಉತ್ತಮ ಉದ್ದೇಶದಿಂದ ನಮ್ಮ ಹಿರಿಯರು ಪೂಜಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಅದನ್ನು ಮುಂದುವರಿಸುವ ಹೊಣೆ ನಮ್ಮ ಮೇಲಿದೆ ಎಂದರು.
ವೇದಿಕೆಯಲ್ಲಿ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ, ಗೌರವಾಧ್ಯಕ್ಷ ಗಿರೀಶ್ ಪಿ.ಎಸ್., ಉಪಸ್ಥಿತರಿದ್ದರು.
ಸುವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾರ್ತ , ಉದಯ ಕುಮಾರ್ ರೈ ಎಸ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಕಾರ್ಯದರ್ಶಿ ಸಂತೋಷ್ ಕೆ. ಮುಕ್ರಂಪಾಡಿ, ರವೀಂದ್ರ ಸಂಪ್ಯ, ಗಣೇಶ್ ಕೆ.ಮುಕ್ರಂಪಾಡಿ, ಪದ್ಮನಾಭ, ಉಲ್ಲಾಸ್ ಮುಕ್ರಂಪಾಡಿ, ದಾಮೋದರ ಪಾಟಾಳಿ, ರಮೇಶ್ ರೈ ಮೊಟ್ಟೆತ್ತಡ್ಕ, ಶಿವಪ್ರಸಾದ್ ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪೂಜಾ ಸಮಿತಿಯಿಂದ ವಸಂತ ಪಂಜಳ, ವಿಶ್ವನಾಥ ಪಂಜಳರವರಿಗೆ ತುಳಸಿಕಟ್ಟೆಯನ್ನು ವಿತರಿಸಲಾಯಿತು.
ಅರ್ಧ ಏಕಾಹ ಭಜನೆ:
ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಅರ್ಧ ಏಕಾಹ ಭಜನೆಯು ೬.೫೭ಕ್ಕೆ ಉದ್ಘಾಟನೆಗೊಂಡಿತು. ನಗರ ಸಭಾ ಸದಸ್ಯೆ ಇಂದಿರಾ ಪುರುಷೋತ್ತಮ ದೀಪಬೆಳಗಿಸಿ ಉದ್ಘಾಟಿಸಿದರು. ನಗರ ಸಭಾ ಸದಸ್ಯೆ ಶಶಿಕಲಾ ಸಿ.ಎಸ್., ಸುವರ್ಣ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಸೋಮಶೇಖರ ರೈ, ಕಾರ್ಯದರ್ಶಿ ಸಂತೋಷ್ ಕೆ.ಮುಕ್ರಂಪಾಡಿ, ಉಪಾಧ್ಯಕ್ಷೆ ಪ್ರಮೀತಾ ಸಿ.ಹಾಸ್, ಕೋಶಾಧಿಕಾರಿ ಶ್ರೀಪಾದ ಮುಕ್ರಂಪಾಡಿ, ಗೌರವ ಸಲಹೆಗಾರರಾದ ಹರಿಣಿ ಪುತ್ತೂರಾಯ ಹಾಗೂ ದಾಮೋಧರ ಪಾಟಾಳಿ ಉಪಸ್ಥಿತರಿದ್ದರು.
ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಬೆಳಿಗ್ಗೆ ೭.೩೦ರಿಂದ ಸ್ವಸ್ತಿ ಪುಣ್ಯಾಹವಾಚನ, ದ್ವಾದಶ ನಾಳಿಕೇರ, ಮಹಾಗಣಪತಿ ಹವನ, ಸುಕೃತ ಹೋಮ, ಪುರಸ್ಸರ, ಶ್ರೀಲಕ್ಷ್ಮೀ ಸತ್ಯನಾರಾಯಣ ಉದ್ಯಾಪನಾ ಹೋಮ, ಶ್ರೀ ದೇವರಿಗೆ ಕಲ್ಪೋಕ್ತಪೂಜಾ ಸಹಿತ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಅರ್ಧಏಕಾಹ ಭಜನೆಯಲ್ಲಿ ಮುಕ್ರಂಪಾಡಿ ಸುಭದ್ರ ಮಹಿಳಾ ಭಜನಾ ಮಂಡಳಿ, ಬೊಳುವಾರು ವೈಷ್ಣವಿ ವೈದೇಹಿ ಭಜನಾ ಮಂಡಳಿ, ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿ, ಮೊಟ್ಟೆತ್ತಡ್ಕ ಮಿಷನ್‌ಮೂಲೆ ಚಾಮುಂಡೇಶ್ವರಿ ಭಜನಾ ಮಂಡಳಿ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಬಲ್ನಾಡು ದುರ್ಗಾಶ್ರೀ ಭಜನಾ ಮಂಡಳಿ, ಗಾನಸಿರಿ ಕಲಾ ಕೇಂದ್ರ, ಬಂಗಾರಡ್ಕ ಶ್ರೀರಾಮ ಭಜನಾ ಮಂಡಳಿ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಪುತ್ತೂರು, ವಜ್ರಮಾತಾ ಮಹಿಳಾ ಭಜನಾ ಮಂಡಳಿ ಹಾಗೂ ಮಹಾವಿಷ್ಣು ಭಜನಾ ಮಂಡಳಿ ಪಾಲಿಂಜೆಯವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಸಂಜೆ ೬.೩೦ಕ್ಕೆ ಅರ್ಧ ಏಕಾಹ ಭಜನೆ ಮಂಗಳ ನಡೆಯಿತು.
ಶ್ರೀಮಾ, ಶ್ರೇಯಾ, ಶ್ರದ್ಧಾ ಪ್ರಾರ್ಥಿಸಿದರು. ಸುವರ್ಣ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಸಲಹೆಗಾರರಾದ ಉದಯಕುಮಾಯ ರೈ ಎಸ್. ಹಾಗೂ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾರ್ತ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಚೌಕಿ ಪೂಜೆ, ಅನ್ನಸಂರ್ತಣೆ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಡೆಯಿತು.