ಶಿವಮೊಗ್ಗ: ರಾಜ್ಯದಲ್ಲಿ ಹಿಜಾಬ್- ಕೇಸರಿ ವಿವಾದ ತಾರಕಕ್ಕೇರಿದ್ದು, ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದ್ದು, ಈ ಮಧ್ಯೆಯೇ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಹಿಜಬ್- ಕೇಸರಿ ಸಂಘರ್ಷ ತಾರಕಕ್ಕೇರಿದೆ. ಅಂತೆಯೇ ಶಿವಮೊಗ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಾರಿಸುವ ಸ್ಥಳದಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ.
ಶಿವಮೊಗ್ಗದ ಬಹುತೇಕ ಕಾಲೇಜುಗಳಲ್ಲಿ ಹಿಜಬ್, ಕೇಸರಿ ಶಾಲು ವಿವಾದ ಭುಗಿಲೆದ್ದಿದೆ. ಸಹ್ಯಾದ್ರಿ ಕಾಲೇಜ್, ಸರಕಾರಿ ಪದವಿ ಕಾಲೇಜ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸರಕಾರಿ ಪದವಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದ್ದಾರೆ.
ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಒಟ್ಟಿನಲ್ಲಿ ಹೈಕೋರ್ಟ್ ವಿಚಾರಣೆ ನಡುವೆಯೇ ರಾಜ್ಯಾದ್ಯಂತ ಹಿಜಬ್- ಕೇಸರಿ ಶಾಲು ಸಂಘರ್ಷ ವಿಕೋಪಕ್ಕೆ ತಿರುಗುತ್ತಿದೆ. ರಾಜ್ಯದ ಹಲವೆಡೆ ಕಲ್ಲುತೂರಾಟ ನಡೆಯುತ್ತಿದೆ.
ಪರಿಸ್ಥಿತಿ ನಿಯಂತ್ರಿಸಲು ಆಯಾ ಕಾಲೇಜಿನ ಆಡಳಿತ ಮಂಡಳಿಗಳು ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.