ಮಂಗಳೂರು: ನಗರದ ಅತ್ತಾವರ ನಂದಿಗುಡ್ಡೆಯ ವಸತಿ ಸಮುಚ್ಚಯವೊಂದರಲ್ಲಿ ಅಪ್ರಾಪ್ತ ಯುವತಿಯರನ್ನು ಬಳಸಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಚೈಲ್ಡ್ ಲೈನ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಹಕಾರದೊಂದಿಗೆ ಮಂಗಳೂರು ಪೊಲೀಸರು ಬೇಧಿಸಿ ನಾಲ್ವರು ಸಂತ್ರಸ್ತ ಯುವತಿಯರನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗಾ ಅಪ್ರಾಪ್ತರೊಬ್ಬರು ನೀಡಿದ ದೂರಿನ ಮೇಲೆ ಇನ್ನೂ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರು ವೇಶ್ಯವಾಟಿಕೆ ಅಡ್ಡೆಗೆ ದಾಳಿ ನಡೆಸಿ ಇಬ್ಬರು ಅಪ್ರಾಪ್ತ ವಯಸ್ಕ ಪಿಯುಸಿ ವಿದ್ಯಾರ್ಥಿನಿಯರು ಸಹಿತ ನಾಲ್ವರು ಯುವತಿಯನ್ನು ರಕ್ಷಣೆ ಮಾಡಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು ಇದೀಗ ಅಪ್ರಾಪ್ತರೊಬ್ಬರು ನೀಡಿದ ದೂರಿನ ಅಧಾರದಲ್ಲಿ ಇಂದು ಏಳು ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತರನ್ನು ಹೊಸಬೆಟ್ಟುವಿನ ಸಂದೀಪ್ (33), ಕಟ್ಟಡ ಗುತ್ತಿಗೆದಾರರಾದ ಕೈಕಂಬದ ಸಿಪ್ರಿಯನ್ ಅಂದ್ರಾಡೆ (40), ರಿಯಲ್ ಎಸ್ಟೇಟ್ ಉದ್ಯೋಗಿ ಉದ್ಯಾವರ ಮಂಜೇಶ್ವರದ ಮೊಹಮ್ಮದ್ ಶರೀಫ್ (46) ತಲಪಾಡಿಯ ರಹಮತ್ (48), ಕಣ್ಣೂರಿನ ಸನಾ (24), ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನರಿಂಗಾನದ ಉಮರ್ ಕುಂಞಿ (43) ಮತ್ತು ಬೆಂದೋರೆವೆಲ್‌ನ ಮೊಹಮ್ಮದ್ ಹನೀಫ್ (46) ಎನ್ನಲಾಗಿದೆ.
ಹತ್ತು ಮಂದಿ ಬಂಧಿತರಲ್ಲಿ ಏಳು ಮಂದಿ ಆರೋಪಿಗಳು ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊದಲು ಅಪ್ರಾಪ್ತರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ನಂತರ ಅವರಿಗೆ ಉಡುಗೊರೆ ಮತ್ತು ಹಣವನ್ನು ನೀಡಿ ಸಂಪರ್ಕವನ್ನು ಗಟ್ಟಿ ಮಾಡಿಕೊಂಡು ನಂತರ ವೇಶ್ಯಾವಟಿಕೆ ದಂಧೆಗೆ ಬಳಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ದೊರಕಿದೆ.
ವೇಶ್ಯಾವಾಟಿಕೆ ನಡೆಯುತ್ತಿದ್ದ ಫ್ಲ್ಯಾಟ್‌ನಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಈ ಅಕ್ರಮ ವ್ಯವಹಾರಗಳಿಗೆ ಪುರಾವೆ ಸಿಕ್ಕಿದೆ. ನಾವು ಕರೆಯುವಾಗ ಇಲ್ಲಿಗೆ ಬಂದು ಗ್ರಾಹಕರಿಗೆ ಸಹಕರಿಸಬೇಕು. ಇಲ್ಲವಾದರೆ ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ಜಾಲತಾಣಗಳಿಗೆ ಅಪ್ ಲೋಡ್ ಮಾಡುತ್ತೇವೆ ಎಂದು ಆರೋಪಿಗಳು ಸಂತ್ರಸ್ತ ಯುವತಿಯರಿಗೆ ಬೆದರಿಕೆ ಹಾಕಿ ಹೀನ ಕೃತ್ಯಕ್ಕೆ ಬಳಸಿಕೊಳ್ಳುಲಾಗುತ್ತಿತ್ತು ಎಂಬ ಮಾಹಿತಿ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.
ವಾಣಿಜ್ಯ ಮತ್ತು ವಸತಿ ಅಪಾರ್ಟ್‌ಮೆಂಟ್‌ನಲ್ಲಿ ಎರಡೂವರೆ ತಿಂಗಳಿನಿಂದ ದಂಧೆ ಸರಾಗವಾಗಿ ನಡೆಯುತ್ತಿತ್ತು. ಆದರೆ ಕಾಯಾರ್ಚರಣೆಯ ನಂತರ ದಂಧೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇರಳ ಮೂಲದ ಗ್ರಾಹಕರು ಸೇರಿದಂತೆ ಸ್ಥಳೀಯರೂ ಇಲ್ಲಿ ಗ್ರಾಹಕರಾಗಿ ಬರುತ್ತಿದ್ದು, ಆರೋಪಿಗಳು ಗ್ರಾಹಕರಿಂದ ಬ್ಯಾಂಕ್ ಮತ್ತು Google Pay ಮೂಲಕ ಹಣದ ವಹಿವಾಟುಗಳನ್ನು ನಡೆಸುತ್ತಿದ್ದ ಪುರಾವೆಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ,
ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಮೂರು ತಿಂಗಳ ಅವಧಿಯಲ್ಲಿ ಆರು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೇರಿ ಇತರ ಕಾಯಿದೆಗಳ ಅಡಿಯಲ್ಲಿ ಐದು ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ಪ್ರತಿ ದಿಕ್ಕಿನಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಏಳು ಪ್ರಮುಖ ಆರೋಪಿಗಳು ಇತರರೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆಯುಕ್ತರು ಹೇಳಿದ್ದಾರೆ.
ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಮ್ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ತನಿಖಾಧಿಕಾರಿ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.