ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪರಿಣಾಮ ನಿನ್ನೆ ನಗರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಮುಖವಾಗಿ ಹಳೇ ಶಿವಮೊಗ್ಗ ಸೇರಿದಂತೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಎಷ್ಟು ಪೊಲೀಸರ ನಿಯೋಜನೆ..?
ಇನ್ನು ನಗರದಾದ್ಯಂತ ಭದ್ರತೆಗಾಗಿ ಇಬ್ಬರು ಎಸ್’ಪಿ, ಒಬ್ಬರು ಹೆಚ್ಚುವರಿ ರಕ್ಷಣಾಧಿಕಾರಿ, 12 ಡಿವೈಎಸ್’ಪಿ, 29 ಇನ್ಸ್’ಪೆಕ್ಟರ್, 54 ಸಬ್ ಇನ್ಸ್’ಪೆಕ್ಟರ್, 48 ಎಎಸ್‘ಐ, 819 ಕಾನ್ಸ್’ಟೇಬಲ್, 20 ಕೆಎಸ್’ಆರ್’ಪಿ, 10 ಡಿಎಎಆರ್ ಹಾಗೂ ರ್ಯಾಪಿಡ್ ಆಕ್ಷನ್ ಫೋರ್ಸ್ ತುಕಡಿ ಸೇರಿದಂತೆ ಸುಮಾರು 2000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ನಗರದಲ್ಲಿ ರೂಟ್ ಮಾರ್ಚ್
ಇನ್ನು, ನಿನ್ನೆ ಗಲಭೆ ನಡೆದ ಹಿನ್ನೆಲೆಯಲ್ಲಿ ಆರ್’ಎಎಫ್ ತುಕಡಿಗಳ ರೂಟ್ ಮಾರ್ಚ್ ನಡೆಸಲಾಯಿತು.ನಿನ್ನೆ ಗಲಭೆ ನಡೆದ ಹಳೇ ಶಿವಮೊಗ್ಗ ಭಾಗದ ಗಾಂಧಿ ಬಜಾರ್, ರವಿವರ್ಮಾ ಬೀದಿ, ಸಿದ್ದಯ್ಯ ರಸ್ತೆ ಅಲ್ಲದೇ ಓಟಿ ರಸ್ತೆ, ಎಂಕೆಕೆ ರಸ್ತೆ, ಅಮೀರ್ ಅಹಮದ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿ, ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಲಾಯಿತು.




























