ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಜಯಗಳಿಸಿದ್ದ ಟೀಂ ಇಂಡಿಯಾಗೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಐಸಿಸಿ ಶೇ.20 ರಷ್ಟು ದಂಡವನ್ನು ವಿಧಿಸಿದೆ. ನಿಗದಿತ ಸಮಯಕ್ಕಿಂತಲೂ ಒಂದು ಓವರ್ ತಡವಾಗಿ ಮುಗಿದ ಹಿನ್ನೆಲೆಯಲ್ಲಿ ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್ ಭಾರತ ತಂಡಕ್ಕೆ ದಂಡ ವಿಧಿಸಿದ್ದಾರೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ನಿಗದಿತ ಅವಧಿಯ ಒಳಗಡೆ ತಂಡ ತನ್ನ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ನಿಗದಿತ ಅವಧಿಯ ಒಳಗಡೆ ಬೌಲಿಂಗ್ ಮುಕ್ತಾಯಗೊಳಿಸದಿದ್ದರೆ ಆಟಗಾರರು ತಮ್ಮ ಪಂದ್ಯದ ಶುಲ್ಕದ ಶೇ.20 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ನಾಯಕ ಕೊಹ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಯಾವುದೇ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.
ಆನ್-ಫೀಲ್ಡ್ ಅಂಪೈರ್‌ಗಳಾದ ಅನಿಲ್ ಚೌಧರಿ, ಕೆ.ಎನ್. ಅನಂತಪದ್ಮನಾಭನ್ ಮತ್ತು ಮೂರನೇ ಅಂಪೈರ್ ವೀರೇಂದ್ರ ಶರ್ಮಾ ಅವರು ರೆಫ್ರಿಗೆ ಭಾರತ ತಂಡದ ವಿರುದ್ಧ ದೂರು ನೀಡಿದ್ದರು. ಎರಡನೇ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 165 ರನ್‌ಗಳ ಗುರಿಯನ್ನು ಪಡೆದಿದ್ದ ಭಾರತ 3 ವಿಕೆಟ್ ಕಳೆದುಕೊಂಡು ಜಯವನ್ನು ಸಾಧಿಸಿತ್ತು. ತಾನು ಆಡಿದ ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ 56 ರನ್(32 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವಿರಾಟ್ ಕೊಹ್ಲಿ ಅಜೇಯ 73 ರನ್(49 ಎಸೆತ, 5 ಬೌಂಡರಿ, 3 ಸಿಕ್ಸರ್) ಹೊಡೆದು ಭಾರತಕ್ಕೆ ಜಯವನ್ನು ತಂದುಕೊಟ್ಟರು.
ಒಂದು ಪಂದ್ಯಕ್ಕೆ ಎಷ್ಟು ನಿಮಿಷ?
ಒಂದು ಟಿ 20 ಪಂದ್ಯ 180 ನಿಮಿಷಗಳಲ್ಲಿ ಮುಗಿಯಬೇಕಾಗುತ್ತದೆ. ಒಂದು ಇನ್ನಿಂಗ್ಸ್‌ಗೆ 90 ನಿಮಿಷ ಇರುತ್ತದೆ. ಎರಡು ಇನ್ನಿಂಗ್ಸ್ ನಡುವೆ 10 ನಿಮಿಷ ಬ್ರೇಕ್ ಇರುತ್ತದೆ. 90 ನಿಮಿಷದ ಒಳಗಡೆ ಇನ್ನಿಂಗ್ಸ್ ಮುಗಿಯದೇ ಇದ್ದಲ್ಲಿ ಬೌಲಿಂಗ್ ಹಾಕುವ ತಂಡಕ್ಕೆ ದಂಡವನ್ನು ವಿಧಿಸಲಾಗುತ್ತದೆ.