ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದ ವಿಚಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರವನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ಪೂರ್ಣ ಪೀಠ ತೀರ್ಪನ್ನು ಕಾಯ್ದಿರಿಸುವುದಾಗಿ ತಿಳಿಸಿದೆ.
ಉಡುಪಿಯ ಸರ್ಕಾರಿ ಬಾಲಕಿಯರ ಪಿ.ಯು ಕಾಲೇಜಿನಲ್ಲಿ ಹಿಜಾಬ್ ವಿವಾದ ಮೊದಲಿಗೆ ಪ್ರಾರಂಭವಾಗಿದ್ದು, ವಿವಾದ ವಿಕೋಪಕ್ಕೆ ಹೋದ ಹಿನ್ನೆಲೆ ವಿದ್ಯಾರ್ಥಿನಿ ರೇಷಮ್ ಹಾಗೂ ಇತರರು ಹೈಕೋರ್ಟಿಗೆ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು.
ಹೈಕೋರ್ಟಿಗೆ ಬಂದಿದ್ದ 40ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸದಸ್ಯಪೀಠ ವಿಚಾರಣೆ ನಡೆಸಿತು.
ಪ್ರಶ್ನೆಯಾಗಿಯೇ ಉಳಿದಿರುವ ಹಿಜಾಬ್ ವಿವಾದದ ಪ್ರಕರಣವನ್ನು ಶೀಘ್ರವಾಗಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದು, ನಿನ್ನೆ ಮಧ್ಯಾಹ್ನದ ಕಲಾಫದಲ್ಲಿ ವಿಚಾರಣೆ ಮುಕ್ತಾಯವಾಯಿತು.
ಅರ್ಜಿದಾರರು ಹಾಗೂ ಪ್ರತಿವಾದಿಗಳ ಪರ ವಕೀಲರು ಮಂಡಿಸಿದ ಸುದೀರ್ಘ ವಾದವನ್ನು 11ನೇ ದಿನವೂ ಆಲಿಸಿದ ಪೀಠ “ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದೇವೆ. ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿತು.