ಬಂಟ್ವಾಳ: ಚೂರಿಯೊಂದಿಗೆ ಮಸೀದಿಯೊಳಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳದಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಮುಹಿಯುದ್ದೀನ್ ಕೇಂದ್ರ ಜುಮ್ಮಾ ಮಸೀದಿ ಮಿತ್ತ ಬೈಲ್ ವಠಾರದಲ್ಲಿ ಘಟನೆ ನಡೆದಿದೆ.
ಬಾಬು ಪೂಜಾರಿ(60) ಎಂಬವರು ಕೃತ್ಯ ಎಸಗಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿ ಮದ್ದ ಮನೆಯ ಅಬ್ದುಲ್ ಸಲಾಂ ಎಂಬವರು ಬಂಟ್ವಾಳ ನಗರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಕೆಂಪು ಬಣ್ಣದ ಹೊಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಬಂದಿದ್ದ ಆರೋಪಿಯು ಮಸೀದಿಯ ದರ್ಗಾ ಸಮೀಪ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡ ಮಸೀದಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿರುವವರು ಆತನನ್ನು ವಿಚಾರಿಸಿದ್ದಾರೆ ಎನ್ನಲಾಗಿದೆ.
”ನಾನು ಮಡಿಕೇರಿಯಿಂದ ಬಂದಿದ್ದು, ಪ್ರಾಥನೆ ಮಾಡಲು ಯಾರಾದರೂ ಒಬ್ಬ ಧರ್ಮ ಗುರು ಬೇಕು” ಎಂದು ಆರಂಭದಲ್ಲಿ ತನ್ನಲ್ಲಿ ವಿಚಾರಿಸಿದವರಲ್ಲಿ ಆತ ಹೇಳಿಕೊಂಡಿದ್ದ ಎಂದು ಹೇಳಲಾಗುತ್ತಿದೆ.. ಇದರಿಂದ ಅನುಮಾನಗೊಂಡ ಅಲ್ಲಿ ಕೆಲಸ ಮಾಡುತ್ತಿದ್ದ ಆತನನ್ನು ತಡೆದು ಸ್ಕೂಟರ್ ಪರಿಶೀಲಿಸಿದಾಗ ಅದರಲ್ಲಿ ಚೂರಿ ಪತ್ತೆಯಾಗಿದೆ.
ನೀನು ಯಾಕೆ ಇಲ್ಲಿಗೆ ಬಂದಿದ್ದಿಯ..? ಎಂದು ವಿಚಾರಿಸಿದಾಗ ನಾನು ಮಸೀದಿಯ ಗುರುಗಳನ್ನು ಹತ್ಯೆ ಮಾಡಲು ಬಂದಿದ್ದು, ಹತ್ಯೆ ಮಾಡುತ್ತೇನೆ ನನ್ನನ್ನು ನೀವು ಏನು ಮಾಡಲು ಸಾಧ್ಯವಿಲ್ಲ ಎಂದು ಆರೋಪಿಯೂ ಹೇಳಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೂಡಲೇ ಅಲ್ಲಿದ್ದವರು ಮಸೀದಿ ಅಡಳಿತ ಮಂಡಳೀಯ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದು ಅಕ್ರಮ ಪ್ರವೇಶ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಪೊಲೀಸರು ಆರೋಪಿಯು ಕೃತ್ಯಕ್ಕೆ ಬಳಸಿದ ಸ್ಕೂಟರನ್ನು ಹಾಗೂ ಆಯುಧವನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಐಪಿಸಿ ಕಲಂ: 448, 506 ರಂತೆ ಪ್ರಕರಣ ದಾಖಲಾಗಿದೆ.