ವಿಟ್ಲ: ಮಹಿಳೆಯೋರ್ವರು ಗುಡ್ಡದಿಂದ ದನದ ಕೊಟ್ಟಿಗೆಗೆ ಸೊಪ್ಪು ತರುತ್ತಿದ್ದ ವೇಳೆ ಆಕೆಯ ಮೈದುನ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆ ವೀರಕಂಭ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ವೀರಕಂಭ ಮೈರ ನಿವಾಸಿ ಜನಾರ್ಧನ ಎನ್ನಲಾಗಿದೆ.
ಆರೋಪಿಯು ಮಹಿಳೆಯ ಗಂಡನ ದೊಡ್ಡಪ್ಪನ ಮಗನಾಗಿದ್ದು, ಮಹಿಳೆಯ ಮನೆಯ ಹತ್ತಿರದಲ್ಲೇ ಅವನ ಸಂಸಾರದೊಂದಿಗೆ ವಾಸವಾಗಿದ್ದ.
ಫೆ.25 ರಂದು ಬೆಳಗ್ಗೆ ಮಹಿಳೆಯ ಗಂಡ ದನದ ಕೊಟ್ಟಿಗೆಗೆ ಸೊಪ್ಪು ತರಲು ಗುಡ್ಡಕ್ಕೆ ಹೋಗಿದ್ದು, ಮಹಿಳೆ ಮನೆ ಕೆಲಸ ಮುಗಿಸಿ ಗುಡ್ಡಕ್ಕೆ ಹೋಗಿ, ಗಂಡ ಕತ್ತರಿಸಿದ್ದ ಸೊಪ್ಪನ್ನು ತರುತ್ತಿದ್ದ ವೇಳೆ ಗುಡ್ಡದಲ್ಲಿ ಅಡ್ಡಗಟ್ಟಿದ ಜನಾರ್ಧನ ಕೈ ಹಿಡಿದು ಎಳೆದು, ಒಂದು ಕೈಯಿಂದ ಬಾಯಿಯನ್ನು ಮುಚ್ಚಿ ಮಾನಭಂಗ ಯತ್ನಿಸಿದ್ದು, ಮಹಿಳೆ ಆತನಿಂದ ಬಿಡಿಸಿಕೊಂಡು ಗಂಡನನ್ನು ಕರೆದಾಗ, ಮಹಿಳೆಯ ಗಂಡ ಮತ್ತು ಇತರರು ಬರುವುದನ್ನು ನೋಡಿ ನೀನು ನನಗೆ ಸಿಗದಿದ್ದರೆ ನಿನ್ನನ್ನು ಮುಂದೆ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























