ಮಂಗಳೂರು: ರಿಟ್ಝ್ ಕಾರಲ್ಲಿ ಬಂದ ಮುಸುಕುಧಾರಿಗಳು ಮೀನಿನ ಟೆಂಪೋವನ್ನು ತಡೆದು ಎರಡು ಲಕ್ಷ ರೂಪಾಯಿ ದರೋಡೆಗೈದು ವ್ಯಾಪಾರಿ ಮೇಲೆ ತಲವಾರಿನಿಂದ ಹಲ್ಲೆಗೈದ ಘಟನೆ ರಾ.ಹೆ. 66ರ ಮಂಗಳೂರು ಹೊರ ವಲಯದ ಉಳ್ಳಾಲ ಸಮೀಪದ ಆಡಂಕುದ್ರು ಎಂಬಲ್ಲಿ ನಡೆದಿದೆ.
ಉಳ್ಳಾಲ ಮುಕ್ಕಚ್ಚೇರಿಯ ಮೀನಿನ ವ್ಯಾಪಾರಿ ಮುಸ್ತಾಫ(47) ತಲವಾರಿನ ಏಟಿನಿಂದ ಗಂಭೀರ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಉಳ್ಳಾಲ ನೇತ್ರಾವತಿ ಸೇತುವೆ ಬಳಿಯ ಆಡಂಕುದ್ರು ಎಂಬಲ್ಲಿ ಘಟನೆ ನಡೆದಿದೆ. ಮುಸ್ತಾಫ ಅವರು ಎಂದಿನಂತೆ ಬೆಳಗ್ಗೆ ತನ್ನ ಏಸ್ ಟೆಂಪೋದಲ್ಲಿ ಮಂಗಳೂರಿನ ದಕ್ಕೆಗೆ ಮೀನು ತರಲೆಂದು ಹೊರಟಿದ್ದರು. ಟೆಂಪೋದಲ್ಲಿ ಮಾಸ್ತಿಕಟ್ಟೆಯ ಮೂಸ ಎಂಬವರು ಜೊತೆಗೆ ಪ್ರಯಾಣಿಸುತ್ತಿದ್ದರು. ಟೆಂಪೊ ಆಡಂಕುದ್ರು ತಲುಪುತ್ತಿದ್ದಂತೆಯೇ ಹಿಂದಿನಿಂದ ಧಾವಿಸಿ ಬಂದ ಕೆಂಪು ಬಣ್ಣದ ರಿಟ್ಝ್ ಕಾರು ಮುಸ್ತಾಫ ಅವರನ್ನ ತಡೆದು ನಿಲ್ಲಿಸಿದೆ.
ರಿಟ್ಝ್ ಕಾರಲ್ಲಿ ಮೂರು ಮುಸಕುಧಾರಿಗಳಿದ್ದು ಇಬ್ಬರು ಕೆಳಗಿಳಿದು ಮುಸ್ತಾಫ ಅವರಲ್ಲಿದ್ದ ಹಣದ ಬ್ಯಾಗನ್ನ ಕೊಡುವಂತೆ ಹೇಳಿದ್ದಾರೆ. ಟೆಂಪೋದಲ್ಲಿಯೇ ಇದ್ದ ಮುಸ್ತಾಫ ಅವರು ಹಣ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ಮುಸುಕುಧಾರಿಗಳು ತಲವಾರನ್ನ ಮುಸ್ತಾಫ ಅವರ ಕುತ್ತಿಗೆಗೆ ಇಟ್ಟು ಹಣ ಎಗರಿಸಿದ್ದು ವಿರೋಧಿಸಿದ ಮುಸ್ತಾಫ ಅವರು ತಲವಾರಿನ ಅಲಗನ್ನು ಗಟ್ಟಿಯಾಗಿ ಎರಡು ಕೈಗಳಲ್ಲಿ ಹಿಡಿದಿದ್ದು ಆಗಂತುಕರು ತಲವಾರನ್ನ ಎಳೆದಾಗ ಎರಡೂ ಕೈಗಳಿಗೂ ಗಂಭೀರ ಗಾಯಗಳಾಗಿದೆ.
ಮುಸ್ತಾಫ ಅವರಲ್ಲಿದ್ದ 2 ಲಕ್ಷ 5 ಸಾವಿರ ರೂಪಾಯಿಗಳನ್ನ ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ಗಾಯಾಳು ಮುಸ್ತಾಫ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದರೋಡೆ ನಡೆದ ಸ್ಥಳಕ್ಕೆ ಎಸಿಪಿ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ, ಸಿಸಿ ಕ್ಯಾಮೆರಾ ಫೂಟೇಜ್ ಅನ್ನು ಪರಿಶೀಲನೆ ನಡೆಸಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.