ಪುತ್ತೂರು : ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ಪ್ರತಿಭಾ ಪ್ರದೀಪ್ತಿ” – ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಶೈಕ್ಷಣಿಕ ವರ್ಷದುದ್ದಕ್ಕೂ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಗಾಯಕಿ ಹಾಗೂ ಪುತ್ತೂರು ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ ಅಖಿಲಾ ಪಜಿಮಣ್ಣು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, “ಎಲ್ಲಾ ಕಲೆಗಳನ್ನು ಹಾಗೂ ಕಲಾ ಪ್ರತಿಭೆಗಳನ್ನು ಗೌರವಿಸಬೇಕು ಹಾಗೂ ಪ್ರೀತಿಸಬೇಕು, ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಜೀವನದಲ್ಲಿ ಏನೇ ನಡೆದರೂ ಅದನ್ನು ಧನಾತ್ಮಕ ದೃಷ್ಟಿಯಲ್ಲಿ ಕಂಡಾಗ ಮಾತ್ರ ನಾವು ನಮ್ಮ ಗುರಿ ಸಾಧಿಸಬಹುದು. ಈ ಸಂಸ್ಥೆಯಲ್ಲಿ ಹಲವಾರು ಪ್ರತಿಭೆಗಳು ಇದ್ದಾರೆ ಅವರನ್ನೆಲ್ಲಾ ಕಂಡಾಗ ಖುಷಿಯಾಗತ್ತದೆ. ಎಲ್ಲರಿಗೂ ನನ್ನ ಅಭಿನಂದನೆಗಳು. ನಿಮ್ಮನ್ನು ನೋಡಿದಾಗ ನನ್ನ ಕಾಲೇಜು ದಿನಗಳು ನೆನಪಾಗುತ್ತವೆ ನಾನು ಕೂಡ ಬೇರೆಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಈ ಸಂಸ್ಥೆಯ ಶಿಕ್ಷಕರು ನನಗೆ ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಓದಿನ ಜೊತೆ ಜೊತೆಗೆ ಸಂಗೀತವನ್ನು ಕಲಿಯಲು ಪ್ರೋತ್ಸಾಹಿಸಿದವರು ನನ್ನ ಗುರುಗಳು ಹಾಗೂ ನಾನು ಈ ಮಟ್ಟಕ್ಕೆ ತಲುಪಲು ಕಾರಣ ನನ್ನ ತಂದೆ ತಾಯಿಗಳು.” ಎಂದು ತನ್ನ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತಾ ಗುರು ಹಿರಿಯರಿಗೆ ಧನ್ಯವಾದಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಅವರು ಮಾತನಾಡಿ,” ಹಲವಾರು ಅಡೆ ತಡೆ ಹಾಗೂ ಸಂಕಷ್ಟಗಳ ನಡುವೆಯೂ ನಾವು ಈ ವರ್ಷ ಹಲವಾರು ಕಾರ್ಯಕ್ರಮಗಳನ್ನು ಹಾಗೂ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ ಎನ್ನಲು ಖುಷಿ ಪಡುತ್ತೇನೆ. ಕಾಲೇಜು ಎಂದರೆ ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಲ್ಲ, ಇಲ್ಲಿ ಬಹಳಷ್ಟು ಅವಕಾಶಗಳಿವೆ, ಅದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಇಂದಿನ ಮುಖ್ಯ ಅತಿಥಿ ನಮ್ಮ ಹಿರಿಯ ವಿದ್ಯಾರ್ಥಿನಿ ಎಂದು ಹೇಳಲು ಹೆಮ್ಮೆಯಾಗುತ್ತದೆ ಅವರ ಭವಿಷ್ಯದ ಜೀವನಕ್ಕೆ ನಮ್ಮ ಶುಭ ಹಾರೈಕೆಗಳು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕರಾದ ಕೃಷ್ಣಪ್ರಸಾದ್ ನಡ್ಸಾರ್ ಅವರು ಮಾತನಾಡಿ,” ನಾವು ಹತ್ತಿ ಬಂದ ಮೆಟ್ಟಿಲುಗಳ ಸ್ಮರಣೆ ನಮಗೆ ಯಾವತ್ತೂ ಇರಬೇಕು. ಶಿಕ್ಷಣದ ಜೊತೆಗೆ ಸಂಸ್ಕೃತಿ ನೀಡಿದಾಗ ಅದು ಪ್ರತಿಭೆಗೆ ಅವಕಾಶ ನೀಡುತ್ತದೆ. ಕಲೆ ಉತ್ತಮ ಜ್ಞಾನ ಮತ್ತು ಸಂಸ್ಕೃತಿಯನ್ನು ನೀಡುತ್ತದೆ ಎಂದರು. ಪುರಸ್ಕಾರದಿಂದ ಅಹಂಕಾರ ಯಾವತ್ತೂ ಬರಬಾರದು. ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಇದೇ ರೀತಿ ನಮ್ಮ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬರಬೇಕು ಎನ್ನುವುದು ನಮ್ಮ ಇಚ್ಛೆ. ಪ್ರತಿಭೆಗೆ ಬೆಳಕು ಹರಿಯಲಿ ಎನ್ನುವುದೇ ಪ್ರತಿಭಾ ಪ್ರದೀಪ್ತಿ ಕಾರ್ಯಕ್ರಮದ ಸಂದೇಶ” ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಪ್ರಾರ್ಥನೆ ಮೂಲಕ ಆರಂಭಿಸಲಾಯಿತು “ಯಕ್ಷ ಗಾಯನ – ವಾದ್ಯ ವಾದನ” ಎಂಬ ಶೀರ್ಷಿಕೆಯಲ್ಲಿ ವಿಘ್ನ ವಿನಾಶಕ ಗಣಪತಿಯನ್ನು ವಿವಿಧ ವಾದ್ಯಗಳ ಮೂಲಕ ಹಾಗೂ ಯಕ್ಷಗಾನ ಶೈಲಿಯಲ್ಲಿ ಸ್ತುತಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು ಹಾಗೂ ಕಾರ್ಯಕ್ರಮದಲ್ಲಿ ಇನ್ನೊಂದು ಆಶಯ ಗೀತೆಯನ್ನು ಹಾಡಲಾಯಿತು, ವಿದ್ಯಾರ್ಥಿಗಳ ಈ ಪ್ರಸ್ತುತಿಗಳು ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ್ ಶೆಟ್ಟಿಗಾರ್ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಭಿಕರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ವರ್ಷದ ವಿವಿಧ ಕಾರ್ಯಕ್ರಮಗಳ ಬಗ್ಗೆ ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕರಾದ ಆದಿತ್ಯ ಶರ್ಮ ಪ್ರಸ್ತುತಪಡಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ರತ್ನಾವತಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.