ಕಡಬ: ತನ್ನದೇ ನಿರ್ಮಾಣ ಹಂತದ ಮನೆಯ ಕಟ್ಟಡದ ಮೇಲಿನಿಂದ ಬಿದ್ದು, ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಂಬಲ್ಲಿ ನಡೆದಿದೆ.
ನೆಲ್ಯಾಡಿ ಗ್ರಾಮದ ಪಡುಬೆಟ್ಟು ತೊಟ್ಟಿಲಗುಂಡಿ ನಿವಾಸಿ, ಕೃಷಿಕ ಸಿಲ್ವೆಸ್ಟರ್ ಡಿ.ಸೋಜ(51) ಮೃತಪಟ್ಟ ದುರ್ದೈವಿ.
ಸಿಲ್ವೆಸ್ಟರ್‌ರವರ ನೂತನ ಮನೆ ನಿರ್ಮಾಣ ಕೆಲಸ ನಡೆಯುತ್ತಿದ್ದು ಗೋಡೆಯ ಹಂತದ ತನಕ ಕಾಮಗಾರಿ ಪೂರ್ಣಗೊಂಡಿತ್ತು. ಮಾ.6ರಂದು ಸಂಜೆ ವೇಳೆಗೆ ಸಿಲ್ವೆಸ್ಟರ್‌ರವರು ಗೋಡೆಯ ಮೇಲೆ ಹತ್ತಿದವರು ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಉಜಿರೆಯ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಸಿಲ್ವೆಸ್ಟರ್‌ರವರು ಚಿಕಿತ್ಸೆಗೆ ಸ್ಪಂದಿಸದೆ ಮಾ.9ರಂದು ಸಂಜೆ ವೇಳೆ ಮೃತಪಟ್ಟಿದ್ದಾರೆ.
40 ದಿನದ ಅಂತರದಲ್ಲಿನ ಒಂದೇ ಕುಟುಂಬದಲ್ಲಿ ಮೂವರ ಸಾವು ತೊಟ್ಟಿಲಗುಂಡಿ ನಿವಾಸಿ ದಿ. ಅಂತೋನಿ ಡಿ.ಸೋಜ ಹಾಗೂ ದಿ.ರೆಖೆಲಾ ದಂಪತಿಗೆ ಸಿಲ್ವೆಸ್ಟರ್ ಸೇರಿ 7 ಮಕ್ಕಳು.
ಸಿಲ್ವೆಸ್ಟರ್ ಸಹೋದರಿ ಬೆಳ್ತಂಗಡಿ ಸವಣಾಲು ನಿವಾಸಿಯಾಗಿದ್ದ ತೆರೆಸಾ ಡಿ.ಸೋಜರವರು ಜ.29ರಂದು ಹೃದಯಾಘಾತದಿಂದ ನಿಧನರಾಗಿದ್ದರು.
ಇದಾದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರ ಸೈಮನ್ ಡಿ.ಸೋಜರವರು ಫೆ.26ರಂದು ಮನೆಯಲ್ಲಿಯೇ ನಿಧನರಾಗಿದ್ದರು. ಇದೀಗ ಸಿಲ್ವೆಸ್ಟರ್‌ರವರು ಆಕಸ್ಮಿಕವಾಗಿ ಮೃತಪಟ್ಟಿದ್ದು ಅವರ ಕುಟುಂಬಕ್ಕೆ 3ನೇ ಆಘಾತವಾಗಿದೆ.