ಆಲಂಕಾರು: ಕೊಯಿಲದ ಜಾನುವಾರು ಸಂವರ್ಧನಾ ಕೇಂದ್ರದ ಹುಲ್ಲುಗಾವಲಿನ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ಗುಡ್ಡದಲ್ಲಿದ್ದ ಹುಲ್ಲುಗಳು ಬೆಂಕಿಗಾಹುತಿಯಾಗಿವೆ.
ಕಡಬ ತಾಲೂಕಿನ ಕೊಯಿಲದ ಜಾನುವಾರು ಸಂವರ್ಧನಾ ಕೇಂದ್ರವು ಸುಮಾರು 700 ಎಕರೆಯಷ್ಟು ಜಾಗ ಹೊಂದಿದ್ದು, ಇದರಲ್ಲಿ ಬಹುಪಾಲು ಮುಳಿಹುಲ್ಲಿನ ಗುಡ್ಡವಾಗಿದೆ. ಸ್ಥಳಿಯರು, ಇಲಾಖಾ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಬೇಸಿಗೆಯಲ್ಲಿ ಇದರಲ್ಲಿರುವ ಮುಳಿಹುಲ್ಲು ಒಣಗಿರುವುದರಿಂದ ಬಹುಬೇಗನೇ ಈ ಗುಡ್ಡಕ್ಕೆ ಬೆಂಕಿ ಹಿಡಿಯುತ್ತದೆ. ದಾರಿ ಹೋಕರು ಬೀಡಿ, ಸಿಗರೇಟ್ ತುಂಡುಗಳನ್ನು ಸೇದಿ ಎಸೆಯುವುದರಿಂದ ವರ್ಷಂಪ್ರತಿ ಈ ಗುಡ್ಡ ಬೆಂಕಿಗಾಹುತಿಯಾಗುತ್ತಿದೆ.
ಅಗ್ನಿಶಾಮಕ ವಾಹನ ದೂರದ ಪುತ್ತೂರು ,ಬೆಳ್ತಂಗಡಿಯಿಂದ ಬರಬೇಕಾಗಿದ್ದು, ಕೊಯಿಲ ಬಹುದೂರವಿರುವುದರಿಂದ ಬರಲು ತಡವಾಗಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.