ಕರುಳಿನ ಕೂಗು, ಕರುಳಿನ ಸಂಕಟ, ಕರುಳಿನ ಕಣ್ಣೀರು.. ಅನುಭವಿಸಿ ನೋವುಂಡವರಿಗಷ್ಟೇ ಗೊತ್ತು. ಈ ಸಂಕಷ್ಟ ನಿವಾರಣೆಗೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಹುಡುಕಿದರೂ ಗುಳಿಗೆ ಸಿಗಲ್ಲ. ಸಂಕಟ ಬಂದಾಗ ವೆಂಕಟರಮಣ ಎಂದು ದೇವರ ಮೊರೆ ಹೋದರೂ ನೆಮ್ಮದಿ ಇರಲ್ಲ. ಕೋಟಿ ಕೋಟಿ ಹಣದ ಸುಪತ್ತಿಗೆ ಸಿಕ್ಕರೂ ಮನಸ್ಸಿನಾಳದ ನೋವು ನಿವಾರಣೆಯಾಗಲ್ಲ. ಜನ್ಮ ನೀಡಿದ ಕೂಸು ‘ಮಾತೃ ಹೃದಯ’ದ ಮುಂದೆ ಇದ್ದರಷ್ಟೇ ನೆಮ್ಮದಿ, ಸಂತೋಷ, ಅದಕ್ಕೊಂದು ಬೆಲೆ.
ಹೀಗಿರುವಾಗ ಪ್ರಪಂಚಕ್ಕೆ ಕಾಲಿಟ್ಟ ಕರುಳ ಬಳ್ಳಿಯೊಂದು ಅಮ್ಮನ ಮಡಿಲಿನಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟರೆ, ಏನಾಗಬೇಡ ಹೇಳಿ.? ಎದೆ ಒಡೆದು ಹೃದಯ ಬಾಯಿಗೆ ಬಂದ ತಳಮಳ.. ನೆನಪು ಆದಾಗೆಲ್ಲ ಸಂಕಟ.. ಕೂತಲ್ಲಿ, ನಿಂತಲ್ಲ, ಹೋದಲೆಲ್ಲಾ ಅದೇ ನೋವು, ಅದೇ ಕಣ್ಣೀರು.. ಹೀಗೆ ಬರೋಬ್ಬರಿ 6 ವರ್ಷಗಳಿಂದ ಕಂದಮ್ಮನಿಗಾಗಿ ರೋಧಿಸುತ್ತಿದ್ದ ತಾಯಿ ಒಬ್ಬರಿಗೆ ಖುಷಿ ಸುದ್ದಿ ಸಿಕ್ಕಿದೆ. ಮನೆಯಲ್ಲಿ ಹರ್ಷೋದ್ಘಾರ ಮೊಳಗಿದೆ.
ಹೌದು.. ಇದೊಂಥರಾ ‘ಭಜರಂಗಿ ಭಾಯಿಜಾನ್’ ಸಿನಿಮಾದ ಕಥೆ ಥರಾನೇ. 2016ರಲ್ಲಿ ಮಾತು ಬಾರದ ಭರತ್ ಎಂಬ ಹುಡುಗ ಅಮ್ಮನ ಜೊತೆ ಯಲಹಂಕ ಮಾರುಕಟ್ಟೆಗೆ ತರಕಾರಿ ಮಾರಲು ಬಂದಿದ್ದ. ಸಿಂಗನಾಯಕನಹಳ್ಳಿಯ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಇದ್ದಕ್ಕಿದ್ದಂತೆ ಜನರ ಸಂತೆಯಲ್ಲಿ ಅಮ್ಮನ ಮಡಿಲಿನಿಂದ ಕಾಣೆಯಾಗಿಬಿಟ್ಟಿದ್ದ. ಮಗನನ್ನ ಕಳೆದುಕೊಂಡ ತಾಯಿ ಪಾರ್ವತಿ, ಎಲ್ಲಾ ಕಡೆ ಹುಡುಕಾಟ ನಡೆಸ್ತಾರೆ. ಇಡೀ ಮಾರುಕಟ್ಟೆ ಹುಡುಕಿದರೂ ಎಲ್ಲಿಯೂ ಮಗನ ಸುಳಿವು ಸಿಗುವುದಿಲ್ಲ. ಗಾಬರಿಗೊಂಡ ತಾಯಿ ಯಲಹಂಕ ಠಾಣೆಗೆ ದೂರು ನೀಡಿದ್ದರು. ಆದರೆ ಕಳೆದುಹೋದ ಮಗನ ಪತ್ತೆ ಆಗಲೇ ಇಲ್ಲ.
ಎಲ್ಲಿಗೆ ಹೋಗಿದ್ದ ಹುಡುಗ..?
ಅಮ್ಮನ ಕಳೆದುಕೊಂಡ ಮಗ ಭರತ್ ಕೂಡ ಹುಡುಕಾಟ ನಡೆಸಿದ. ಅಮ್ಮ ಎಲ್ಲಿದ್ದಾಳೆ..? ಹೇಗೆ ಹೋಗಬೇಕು ಅಂತೆಲ್ಲಾ ತಡಕಾಡಿದ್ದ. ಮಾತು ಬಾರದ ಹಿನ್ನೆಲೆಯಲ್ಲಿ ಮಡಿಲು ಸೇರಲು ಆಗಲಿಲ್ಲ. ದಿಕ್ಕು ತೋಚದಂತಾದ ಭರತ್, ಯಲಹಂಕ ರೈಲ್ವೇ ನಿಲ್ದಾಣಕ್ಕೆ ಬಂದು ಅಲ್ಲಿಂದ ಮಹಾರಷ್ಟ್ರದ ನಾಗಪುರಕ್ಕೆ ಹೋಗಿಬಿಟ್ಟ. ಕಾಣೆಯಾದ ಎರಡು ಮೂರು ದಿನಕ್ಕೆ ಆತ ಅಲ್ಲಿಗೆ ಹೋಗಿದ್ದಲ್ಲ. ಅಮ್ಮನಿಂದ ತಪ್ಪಿಸಿಕೊಂಡು ಬರೋಬ್ಬರಿ 10 ತಿಂಗಳ ಬಳಿಕ ಅಲ್ಲಿಗೆ ಹೋಗಿದ್ದ ಅನ್ನೋ ಮಾಹಿತಿ ಇದೆ. ಕೊನೆಗೊಂದು ದಿನ ನಾಗ್ಪುರ ರೈಲ್ವೇ ನಿಲ್ದಾಣವನ್ನ ಸೇರಿದ್ದ ಭರತನನ್ನ, ಅಲ್ಲಿನ ಅಧಿಕಾರಿಗಳು ಗಮನಿಸುತ್ತಾರೆ. ನಂತರ ಪುನರ್ವಸತಿ ಕೇಂದ್ರಕ್ಕೆ ಆತನನ್ನ ಸೇರಿಸುತ್ತಾರೆ.
ಭರತ್ ಅಮ್ಮನ ಮಡಿಲು ಸೇರಿದ್ದು ಹೇಗೆ..?
ಭರತ್ ಅದಾಗಲೇ ಮಹಾರಾಷ್ಟ್ರಕ್ಕೆ ಹೋಗಿ ಬರೋಬ್ಬರಿ 6 ವರ್ಷಗಳೇ ಕಳೆದುಹೋಗಿತ್ತು. ಪುನರ್ವಸತಿ ಕೇಂದ್ರದಲ್ಲಿರುವ ಅಧಿಕಾರಿಗಳು, ಭರತ್ಗೆ ಆಧಾರ್ ಕಾರ್ಡ್ ಮಾಡಿಸಲು ನಿರ್ಧರಿಸಿದ್ದರು. ಅದರಂತೆ, 2022, ಜನವರಿಯಲ್ಲಿ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿ ಆಧಾರ್ ಕಾರ್ಡ್ ಮಾಡಿಸಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನ ಮಾಡಲಾಗಿತ್ತು.
ಆದರೆ ಕೆಲ ದಿನಗಳ ಬಳಿಕ ಭರತ್‌ನ ಹೊಸ ಆಧಾರ್ ಕಾರ್ಡ್ ತಿರಸ್ಕೃತ ಆಗಿರುವ ಬಗ್ಗೆ ಆಧಾರ್ ಸೇವಾ ಕೇಂದ್ರ ಅಧಿಕಾರಿ ಅನಿಲ್ ಮರಾಠೆ ಮಾಹಿತಿ ನೀಡಿದರು. ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಲ್ಲಿರುವ ಬಗ್ಗೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ತಿಳಿಸಿದರು. ವಿಷಯ ಗೊತ್ತಾದ ಕೂಡಲೇ ಭರತ್ ಪೋಷಕರ ವಿಳಾಸ ಪತ್ತೆಗೆ ಪುನರ್ವಸತಿ ಕೇಂದ್ರ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ಪ್ರಯತ್ನ ನಡೆಯುತ್ತದೆ.
ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ವ್ಯಕ್ತಿಯ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡಕ್ಕೂ ಸಾಮ್ಯತೆ ಇರೋದು ಕಂಡು ಬಂದಿದೆ. ಅಲ್ಲದೇ ಆ ಆಧಾರ್ ಕಾರ್ಡ್‌ನಲ್ಲಿ ಭರತ್‌ನ ತಾಯಿ, ಪಾರ್ವತಮ್ಮ ಅವರ ಮೊಬೈಲ್ ನಂಬರ್ ಇರೋದು ಗೊತ್ತಾಗಿದೆ. ಇದರಿಂದ ಮತ್ತಷ್ಟು ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುತ್ತಾರೆ.
ಕರುಳಿನ ಕೂಗು ಕರೆಯುತ್ತಲೇ ಇತ್ತು..!
ಕೊನೆಗೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಯಲಹಂಕ ಪೊಲೀಸರನ್ನು ಸಂಪರ್ಕಸ್ತಾರೆ. ಯಲಹಂಕ ಪೊಲೀಸರು ಕೊನೆಗೂ ಪಾರ್ವತಮ್ಮ ಅವರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ. ಕೂಡಲೇ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್, ಪಾರ್ವತಮ್ಮ ಅವರನ್ನ ನಾಗ್ಪುರಕ್ಕೆ ಕಳುಹಿಸುತ್ತಾರೆ. ಮಾರ್ಚ್ 7 ರಂದು 19 ವರ್ಷದ ಮಗನನ್ನು ಕಂಡು ಪಾರ್ವತಮ್ಮ ಭಾವುಕರಾಗುತ್ತಾರೆ. ಅದಾದ ಎರಡು ದಿನಗಳ ಬಳಿಕ ಮಗನನ್ನು ಮನೆಗೆ ಕರೆದುಕೊಂಡು ಬರುತ್ತಾರೆ.
ತಾಯಿ ಮಗನ ಬೆಸುಗೆ ತಪ್ಪಿ 6 ವರ್ಷಗಳೇ ಕಳೆದು ಹೋಗಿತ್ತು. ಕಾಣೆಯಾದ ಪುತ್ರನಿಗೆ ಹಂಬಲಿಸಿ ದೇವರಿಗೆ ಮಾಡಿಕೊಂಡ ಹರಕೆಗಳು ಲೆಕ್ಕಕ್ಕೇ ಇಲ್ಲವಂತೆ. ಕೊನೆಗೂ ಸುಪುತ್ರ ಮನೆ ಸೇರಿರುವ ಸಂತೋಷ ಪಾರ್ವತಮ್ಮರಲ್ಲಿ ತುಂಬಿದೆ. ಇಲ್ಲಿ ಭಾಯಿಜಾನ್ ನಂತೆ ಕಾರ್ಯ ನಿರ್ವಹಿಸಿರುವ ಪುನರ್ ವಸತಿ ಕೇಂದ್ರ ಮತ್ತು ಆಧಾರ್ ಕೇಂದ್ರದ ಅಧಿಕಾರಿಗಳಿಗೂ ಸಲಾಂ ಹೇಳಲೇಬೇಕು.