ಪುತ್ತೂರು: ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಾಗ ಜೀವನದ ಪಯಣ ಸುಗಮವಾಗುತ್ತದೆ. ಎದುರಾಗುವ ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸುವಲ್ಲಿ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ಧೈರ್ಯವನ್ನು ಕಳೆದುಕೊಳ್ಳದೆ ಛಲದಿಂದ ಮುನ್ನಡೆದರೆ ವ್ಯಕ್ತಿ ಮೌಲ್ಯದ ಉತ್ತಮ ಪ್ರತಿನಿಧಿಯಾಗಿ ಮೂಡಿ ಬರಲು ಸಾಧ್ಯವಾಗುತ್ತದೆ ಎಂದು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ದೀಪ ಪ್ರದಾನ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಗೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಉತ್ತಮ ಅಂಕಗಳನ್ನು ರ‍್ಯಾಂಕ್‌ಗಳನ್ನು ಗಳಿಸಲು ವಿದ್ಯಾರ್ಥಿಗಳು ಸತತ ಪರಿಶ್ರಮ ಅತ್ಯಗತ್ಯ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ, ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸುವಂತಾಗಬೇಕು. ನಮ್ಮ
ಭವಿಷ್ಯವನ್ನು ನಾವೇ ನಿರ್ಧರಿಸಬೇಕು. ಪಠ್ಯವನ್ನು ಮೀರಿದ ಜೀವನ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಇಚ್ಛಾಶಕ್ತಿ, ಆತ್ಮಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯೆ, ವಿನಯ, ರಾಷ್ಟ್ರಪ್ರಜ್ಞೆಗಳನ್ನು ಮೈಗೂಡಿಸಿಕೊಂಡು ಸಮಾಜವು ಗುರುತಿಸುವಂಥ ಕಾರ್ಯಗಳನ್ನು ಕೈಗೊಳ್ಳಬೇಕು.
ಕಾಲೇಜಿನಲ್ಲಿ ಕಲಿತ ಪ್ರತಿಭಾನ್ವಿತ ಕುಡಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನತನದ ಛಾಪು ಒತ್ತುವುದರೊಂದಿಗೆ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಕಾಲೇಜಿನಲ್ಲಿ ಕಲಿತ ವಿದ್ಯಾಲಯದ ಚಿಂತನೆಯನ್ನು ದೈನಂದಿನ ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು.
ವಿವೇಕಾನಂದರ ಹೆಸರನ್ನು ಇಟ್ಟುಕೊಂಡ ಈ ಸಂಸ್ಥೆಯ ಧ್ಯೇಯ, ವಿವೇಕಾನಂದರ ವ್ಯಕ್ತಿತ್ವ, ರಾಷ್ಟ್ರಪ್ರಜ್ಞೆ ಎಲ್ಲರದಾಗಬೇಕು. ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜದಲ್ಲಿ ಹೊಳೆಯುವ ವಜ್ರಗಳಾಗಿ ರೂಪುಗೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೆ ವಿಶೇಷ ಅಭ್ಯಾಗತರಾಗಿ ಆಗಮಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರಿನ ಸ್ಕಿನ್ ಕ್ಲಿನಿಕ್ ತಜ್ಞ ಡಾ. ಸಚಿನ್ ಮನೋಹರ್ ಶೆಟ್ಟಿ ಮಾತನಾಡಿ, ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುವುದು
ಮಾತ್ರವಲ್ಲ ದೇಶದ ಉತ್ತಮ ಪ್ರಜೆಯಾಗಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಗುರುಹಿರಿಯರನ್ನು ಗೌರವಿಸಿ ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು.
ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ವಿಚಾರಗಳು , ಬೆಳೆಸಿಕೊಳ್ಳುವ ಮೌಲ್ಯಗಳು , ಪಡೆಯುವ ವಿದ್ಯೆ ಎಲ್ಲವೂ ಮುಂದಿನ ಬಾಳಿನಲ್ಲಿ ದಾರಿದೀಪವಾಗುವುದು ಎಂದು ನುಡಿದರು.
ಇನ್ನೋರ್ವ ಅತಿಥಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆನಂದ ಪಿ ಮಾತನಾಡಿ ಕಲಿಯುತ್ತಿರುವ ವಿದ್ಯೆಯನ್ನು ಕ್ರಮಬದ್ಧತೆಯಿಂದ ಪೂರೈಸಿದಾಗ ಯಶಸ್ಸನ್ನು ಗಳಿಸಲು ಸಾಧ್ಯ. ಇಂದು ಜಗತ್ತೇ ನಮ್ಮ ಕೈಯಲ್ಲಿದೆ. ಅಂತರ್ಜಾಲದಿಂದ ವಿಶಾಲವಾದ ಮಾಹಿತಿಯನ್ನು ವಿದ್ಯಾರ್ಥಿಗಳು ಪಡೆಯಬಹುದು. ಆದರೆ ಮಾನವೀಯ ಮೌಲ್ಯಗಳು ಒಬ್ಬ ಗುರುವಿನಿಂದ ಮಾತ್ರ ತಿಳಿಯುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಮನಸ್ಸಿನ ಚಂಚಲತೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಓದಿದ್ದನ್ನು ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಂಡಾಗ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯು ಸಮಾಜದ ಸುಖಕ್ಕೆ ಉಪಯೋಗಬೇಕು. ಸಹಜ ಕಲಿಕೆಯ ಖುಷಿಯನ್ನು ಅನುಭವಿಸಬೇಕು. ತಮ್ಮ ಯಶಸ್ಸಿಗೆ ಕಾರಣರಾದ ವ್ಯಕ್ತಿಗಳನ್ನು ನಾವು ಎಂದೂ ಮರೆಯಬಾರದು. ಶಿಕ್ಷಣದ ಎಲ್ಲ ಆಯಾಮಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆಯಬೇಕು. ಜೀವನದ ಗುರಿಯನ್ನು ತಲುಪುವಲ್ಲಿ
ಸಾಕಷ್ಟು ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿನ ದೌರ್ಬಲ್ಯದಿಂದ ಹೊರಬಂದು ಭಾವನಾತ್ಮಕ ಸ್ಥಿರತೆಯನ್ನು ಗಟ್ಟಿ ಮಾಡಿಕೊಂಡಾಗ ನಮ್ಮಲ್ಲಿನ ಶಕ್ತಿಯು ಹೊರಹೊಮ್ಮಲು ಸಾಧ್ಯವಾಗುತ್ತದೆ.
ಯಾವುದೇ ಕ್ಷೇತ್ರವಾದರೂ ಅದನ್ನು ಆರಿಸಿ ಸಾಧನೆ ಮಾಡುತ್ತಾ ಮುಂದುವರೆಯಬೇಕು, ಜೊತೆಗೆ ತಾನು ಕಲಿತ ಸಂಸ್ಥೆಯನ್ನು, ಕಲಿಸಿದ ಗುರುಗಳನ್ನು ಗೌರವಿಸುವಂತಾಗಬೇಕು. ಜೀವನದಲ್ಲಿ ನಂಬಿಕೆ, ನಮ್ರತೆ ಮತ್ತು
ವಿನಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ದೀಪ ಪ್ರದಾನ ಕಾರ್ಯಕ್ರಮ:
2021-22ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಪುನೀತ್, ಗುರುಪ್ರಸಾದ್, ದೀಪಾಲಿ ,ಧರಿತ್ರಿ, ಅಭಯ್ ಮತ್ತು ವಾಸುದೇವ ತಿಲಕ್ ರವರಿಂದ ದೀಪ ಪ್ರಜ್ವಲಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ವಿನಯ್, ಅಭಿರಾಮ್, ಶ್ರೀಪಾದ, ನಿಶ್ಚಿತಾ, ಮೋಕ್ಷಿತಾ ಮತ್ತು ಮಧು ಕೆ.ಆರ್ ರವರಿಗೆ ಹಸ್ತಾಂತರಿಸಲಾಯಿತು. ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದೊಂದಿಗೆ ಕಿರಿಯ ವಿದ್ಯಾರ್ಥಿಗಳು ಮುನ್ನಡೆಯಬೇಕೆಂಬುದು ಈ ಕಾರ್ಯಕ್ರಮದ ಆಶಯವಾಗಿತ್ತು. ಬಳಿಕ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ, ವಿಜ್ಞಾನಸಂಘ ಮತ್ತು ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2020-21ನೇ ಶೈಕ್ಷಣಿಕ ಸಾಲಿನ ಇಂಜಿನಿಯರಿಂಗ್ ಅಂತಿಮ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ
ಎಂಟನೇ ರ‍್ಯಾಂಕ್ ಗಳಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಕೃತಿಕಾ ಕೆ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಗಳಿಸಿದ ರಂಜನ್.ಎ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್, ಸದಸ್ಯರಾದ ವತ್ಸಲಾರಾಜ್ಞಿ, ರವಿ ಮುಂಗ್ಲಿಮನೆ, ಡಾ. ಕೆ.ಎನ್. ಸುಬ್ರಹ್ಮಣ್ಯ ,ಡಾ. ಕೃಷ್ಣ ಪ್ರಸನ್ನ ಕೆ. ಶಿಕ್ಷಕ- ರಕ್ಷಕ ಸಂಘದ ಪದಾಧಿಕಾರಿಗಳು, 2021-22 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುನೀತ್ , ಜೊತೆಕಾರ್ಯದರ್ಶಿ ಧರಿತ್ರಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಕವಿತಾ ಕಾರ್ಯಕ್ರಮವನ್ನು ನಿರೂಪಿಸಿ, ಶರ್ಮಿಳಾ ವಂದಿಸಿದರು.
ಯಕ್ಷ ಕವನ- ಕೃತಜ್ಞತಾ ನಮನ:
ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ರೂಪುಗೊಳ್ಳಲು ಕಲಿತ ಸಂಸ್ಥೆ, ಪೋಷಣೆ ನೀಡಿದ ಪೋಷಕರು, ಮಾರ್ಗದರ್ಶನ ನೀಡಿದ ಗುರುಗಳ ತ್ಯಾಗ ಇದೆ. ಇದನ್ನು ವಿದ್ಯಾರ್ಥಿಗಳಿಗೆ ನೆನಪಿಸಿ ಜೀವನದಲ್ಲಿ ನೈತಿಕತೆಯನ್ನು ರೂಪಿಸಿಕೊಳ್ಳಲು ಅಭಿನಂದನೆಯ ಜೊತೆ ಮಾರ್ಗದರ್ಶನವನ್ನು ಯಕ್ಷಗಾನದ ಹಾಡಿನ ಮೂಲಕ ಪ್ರಸ್ತುತ ಪಡಿಸಲಾಯಿತು. ಹಿಮ್ಮೇಳದಲ್ಲಿ ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ಚಿನ್ಮಯ ಕೃಷ್ಣ ಭಾಗವತಿಕೆಯಲ್ಲಿ, ಚೆಂಡೆಯಲ್ಲಿ ಲಕ್ಷ್ಮೀಶ ಭಟ್ ಮತ್ತು ಶ್ರೀಕುಮಾರ್, ಮದ್ದಳೆಯಲ್ಲಿ ಶರಣ್ಯ ಮತ್ತು ಯತಿನ್ ಮತ್ತು ಚಕ್ರತಾಳದಲ್ಲಿ ಲಕ್ಷ್ಮೀಶಅರ್ಪಣ್ ಸಹಕರಿಸಿದರು. ಪರಿಕಲ್ಪನೆ ಮತ್ತು ಸಾಹಿತ್ಯವನ್ನು ಕಾಲೇಜಿನ ಉಪನ್ಯಾಸಕರಾದ ಶ್ರೀಧರ ಶೆಟ್ಟಿಗಾರ್, ಶ್ರೀವತ್ಸ ಮತ್ತು ರಾಧೇಶ್ ಇವರ ಮಾರ್ಗದರ್ಶನದಲ್ಲಿ ಮೂಡಿಬಂತು.
ಅದೇ ರೀತಿ ದೀಪ ಪ್ರದಾನ ಕಾರ್ಯಕ್ರಮದಲ್ಲಿ ವಾದ್ಯ ವಾದನ- ಅತಿಥಿ ನಮನ ನಡೆಯಿತು. ವಿದ್ಯಾರ್ಥಿಗಳಾದ ಅಂಜಲಿ ಕೀಬೋರ್ಡ್ನಲ್ಲಿ, ತಬಲದಲ್ಲಿ ಕೀರ್ತನ್‌ರಾಜ್ ಮತ್ತು ವೈಶಾಖ್, ರಿದಮ್ ಪ್ಯಾಡ್ ನಲ್ಲಿ ಲಕ್ಷ್ಮೀಶ ಅರ್ಪಣ್, ಕೊಳಲುನಲ್ಲಿ ವೈಶಾಖ್, ಸ್ಯಾಕ್ಸೋಪೋನ್‌ನಲ್ಲಿ ಅನ್ವಿತಾ, ಸಹಕರಿಸಿದರು.