ಮಂಗಳೂರು: ಯು.ಟಿ ಖಾದರ್ ಜೊತೆ ರಾಜಕಾರಣ ಮಾಡುವುದಕ್ಕಿಂತ ಆತ್ಮಹತ್ಯೆ ಮಾಡುವುದೇ ಲೇಸು. ಅವರು ಸ್ವಾರ್ಥಿ, ಮನುಷ್ಯತ್ವ, ಕರುಣೆ ಇಲ್ಲದ ಓರ್ವ ಭ್ರಷ್ಟ ರಾಜಕಾರಣಿ ಎಂದು ಉಳ್ಳಾಲದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಯು.ಟಿ ಖಾದರ್ ಕಾರ್ಯ ವೈಖರಿ ಬೇಸತ್ತು ನಾನು ಮತ್ತು 100ಕ್ಕೂ ಅಧಿಕ ಬೆಂಬಲಿಗರು ನಾಳೆ ಮಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ.
ಖಾದರ್ ಸತತ 4 ಬಾರಿ ಶಾಸಕರಾಗಿ ಮಂತ್ರಿಯಾಗಿ ಕೆಲಸ ನಿರ್ವಹಿಸಿದವರು. ಅವರ ಅವಧಿಯಲ್ಲಿ ಎಷ್ಟೋ ಅವಕಾಶವಿದ್ದರೂ, ಜನರ ಮನಸ್ಸಿನಲ್ಲಿ ಉಳಿಯುವಂತಹ ಯಾವುದೇ ಕೆಲಸ ಮಾಡಿಲ್ಲ. ಉಳ್ಳಾಲದಲ್ಲಿ ಸರ್ಕಾರಿ ಹೈಟೆಕ್ ಆಸ್ಪತ್ರೆ ಮಾಡಬಹುದಿತ್ತು. ಅದನ್ನು ಮಾಡಲಿಲ್ಲ. ವಸತಿ ಸಚಿವರಾಗಿ ಮನೆ ಒದಗಿಸುವ ಕೆಲಸ ಮಾಡಿಲ್ಲ. ಒಂಭತ್ತು ಕೆರೆ ಯೋಜನೆ ಅಭಿವೃದ್ಧಿಪಡಿಸಲಾಗಿಲ್ಲ. ಅದೀಗ ಹಂದಿಗೂಡಿನಂತಿದೆ. ಬಡವರಿಗೆ ಮನೆ ಇಲ್ಲ ಆದರೆ ಇವರಿಗೆ ದೇಶಾದ್ಯಂತ ಇವರಿಗೆ ಮನೆಗಳಿವೆ. ತೊಕ್ಕೊಟ್ಟು-ಕೊಣಾಜೆ ರಸ್ತೆ ಸರಿಪಡಿಸಲಾಗಿಲ್ಲ. ಸಣ್ಣ ಸಣ್ಣರೋಡ್ ಕೊಟ್ಟು ಪೋಸ್ ಕೊಟ್ಟಿದ್ದಾರೆ.
224 ಶಾಸಕರಲ್ಲಿ ಸ್ವಾರ್ಥಿ, ಮನುಷ್ಯತ್ವ, ಕರುಣೆ ಇಲ್ಲದ ಶಾಸಕ ಎಂದರೆ ಯು.ಟಿ ಖಾದರ್. ಮದುವೆ, ಮುಂಜಿ, ತೊಟ್ಟಿಲು ಹಾಕುವ ಕಾರ್ಯಕ್ರಮಕ್ಕೆ ಹೋಗಿ ಒಬ್ಬ ಸರಳ ರಾಜಕಾರಣಿ ಅಂತ ಪೋಸ್ ಕೊಡುತ್ತಾರೆ. ಇದರಿಂದ ಬೇಸತ್ತು 100ಕ್ಕೂ ಅಧಿಕ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಕಾಂಗ್ರೆಸ್ ಸದಸ್ಯರಾದ ಶ್ರೀನಿವಾಸ ಶೆಟ್ಟಿ, ಪುರುಷೋತ್ತಮ ಅಂಚನ್ ವೈದ್ಯನಾಥ ನಗರ, ಪದ್ಮನಾಭ ಗಟ್ಟಿ, ವಿನ್ಸಿ ಡಿ ಸೋಜಾ, ಲವೀಶ್ ಶೆಟ್ಟಿ ಸಹಿತ ಪಕ್ಷದ ಹಲವು ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಅವರು ಹೇಳಿದರು.