ಪುತ್ತೂರು: ಮನೆ ಮುಂದೆ ಭವಿಷ್ಯ ಹೇಳಲು ಬಂದ ಬುಡಬುಡಿಕೆಯವರಲ್ಲಿ ಮನೆಯ ಸಂಕಷ್ಟ ಹೇಳಿಕೊಂಡು ಮೊದಲೇ ಕಷ್ಟದಲ್ಲಿದ್ದ ಮಹಿಳೆ ಪಡಬಾರದ ಪಾಡು ಪಟ್ಟ ಘಟನೆಯೊಂದು ಕಾಣಿಯೂರು ಸಮೀಪದ ಪುಣ್ಚಾತ್ತಾರು ಎಂಬಲ್ಲಿ ನಡೆದಿದೆ.
ಭವಿಷ್ಯ ಹೇಳಲು ಬಂದ ಬುಡಬುಡಿಕೆಯವರಲ್ಲಿ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆ ಹೇಳಿಕೊಂಡಿದ್ದು, ಅದನ್ನು ಪರಿಹರಿಸಲು ಪೂಜೆ ಮಾಡುವ ನೆಪದಲ್ಲಿ ರೂ.15 ಸಾವಿರಕ್ಕೂ ಮಿಕ್ಕಿ ಹಣವನ್ನು ಶಿವಮೊಗ್ಗ ಮೂಲದ ಇಬ್ಬರು ಮಹಿಳಾ ಬುಡುಬುಡಿಕೆಯವರು ಪಡೆದುಕೊಂಡಿದ್ದಾರೆ, ಆದರೂ ಸಮಸ್ಯೆ ಬಗೆ ಹರಿಯಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಆ ಮಹಿಳೆ ಬುಡಬುಡಿಕೆಯವರಲ್ಲಿ ವಿಚಾರಿಸಿದಾಗ ಹಾಸನದಲ್ಲಿ ಇನ್ನೊಂದು ಪೂಜೆ ಮಾಡಲಿದೆ ಎಂದು ಹೇಳಿ ಅವರು ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದು, ಈ ವೇಳೆ ಅಲರ್ಟ್ ಆದ ಮಹಿಳೆ ಇದೊಂದು ಮೋಸ ಮಾಡುವ ತಂತ್ರ ಎಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಚಾರಣೆ ನಡೆಸಿದ ಮಹಿಳಾ ಪೊಲೀಸರು ನಕಲಿ ಬುಡುಬುಡುಕೆಯವರನ್ನು ವಶಕ್ಕೆ ಪಡೆದು ವಿಚಾರಿಸಿ, ಮಹಿಳೆಯಿಂದ ಪಡೆದುಕೊಂಡಿದ್ದ ಹಣವನ್ನು ವಸೂಲಿ ಮಾಡಿ ಮಹಿಳೆಗೆ ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.