ಪುತ್ತೂರು: ಬಸ್ ನಿಲ್ದಾಣದ ಬಳಿಯಲ್ಲಿರುವ ಅಕ್ವೇರಿಯಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಾಲ್ಮರ ನಿವಾಸಿ ಸುಲೈಮಾನ್ ಯಾನೆ ಆಶೀಪ್ ನಾಪತ್ತೆಯಾಗಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಆದರೇ ಈ ನಾಪತ್ತೆ ವಿಷಯ ಮತ್ತೊಂದು ಹೊಸ ತಿರುವು ಪಡೆದಿದ್ದು, ಆತ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ಅದನ್ನು ಹಿಂತಿರುಗಿಸಲಾಗದೆ ಮನೆ ಬಿಟ್ಟು ಹೋಗಿದ್ದಾನೆ ಎನ್ನುವಂತಹ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ನನಗೆ ಒಬ್ಬ ಮೋಸ ಮಾಡಿದ್ದಾನೆ ಲಾಭ ಮಾಡಿಸುತ್ತೇನೆ ಎಂದು ಹಣ ಪಡೆದು ಕಳೆದ ತಿಂಗಳಿನಿಂದ ನನ್ನ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ ಅವನನ್ನು ಹುಡುಕಿ ಕೊಂಡು ನಾನು ಹೋಗುತ್ತಿದ್ದೇನೆ’ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ವೈರಲ್ ಆದ ನಂತರ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ತಾರಿಗುಡ್ಡೆ ಇಬ್ರಾಹಿಂರವರ ಪುತ್ರ ಸುಲೈಮಾನ್ ಯಾನೆ ಆಶೀಪ್(27) ಹಣ ಪಡೆದವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮನೆ ಬಿಟ್ಟು ತೆರಳಿದ್ದಾನೆ ಎಂದು ಸಾರ್ವಜನಿಕ ವಲಯದಲ್ಲಿ ಹೇಳಲಾಗುತ್ತಿದೆ. ಸುಲೈಮಾನ್ ಪತ್ತೆಯ ನಂತರವೆ ನಿಜಾಂಶ ತಿಳಿಯಬೇಕಿದೆ..
ಸುಲೈಮಾನ್ ಅಕ್ವೇರಿಯಂ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ. ಮಾ.7 ರಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ಮನೆ ವಾಪಸ್ ಆಗಿಲ್ಲ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಆತ ಪತ್ತೆಯಾಗಿಲ್ಲ ಎಂದು ತಾಯಿ ಹಾಜಿರಾರವರು ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.