ಪುತ್ತೂರು: ನಗರ ಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್ ರವರು ಪೌರಾಯುಕ್ತರಾದ ರೂಪ ಟಿ ಶೆಟ್ಟಿಯವರು ನನಗೆ ಜಾತಿ ನಿಂದನೆ ಮಾಡಿ ಅವಮಾನಿಸಿರುತ್ತಾರೆ ಎಂದು 2018 ರ ಜು.7 ರಂದು ಪುತ್ತೂರು ಪೊಲೀಸ್ ಠಾಣೆ ದೂರು ನೀಡಿದ್ದರು.
ಪುತ್ತೂರು ನಗರ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ರವರು ಈ ದೂರಿನಂತೆ ಎಫ್.ಐ.ಆರ್. ದಾಖಲಿಸದೇ ಹಿಂಬರಹ ನೀಡಿದ್ದರು. ಈ ಕುರಿತು ಜಯಂತಿ ಬಲ್ನಾಡ್ ರವರು ಮಂಗಳೂರಿನ ಸೆಷನ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಮಂಗಳೂರು ಸೆಷನ್ ನ್ಯಾಯಾಲಯವು ಈ ಕುರಿತು ತನಿಖೆ ನಡೆಸುವಂತೆ ಪುತ್ತೂರು ಡಿವೈಎಸ್ಪಿಗೆ ಆದೇಶ ಮಾಡಿತ್ತು. ಪುತ್ತೂರು ಡಿವೈಎಸ್ಪಿ ಆಗಿದ್ದ ಶ್ರೀನಿವಾಸ್ ರವರು ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ನಡೆಸದೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು.
ಈ ಮದ್ಯೆ ಈ ಪ್ರಕರಣವು ಮಂಗಳೂರಿನಿಂದ ಪುತ್ತೂರು ಸೆಷನ್ ಕೋರ್ಟ್ ವರ್ಗಾವಣೆಗೊಂಡಿತ್ತು ಈ ಪ್ರಕರಣದ ಬಗ್ಗೆ ಪೊಲೀಸರು ಸಲ್ಲಿಸಿದ್ದ “ಬಿ” ರಿಪೋರ್ಟ್ ಗೆ ದೂರುದಾರರಾದ ಜಯಂತಿ ಬಲ್ನಾಡ್ ರವರು ತೀವ್ರವಾಗಿ ಆಕ್ಷೇಪ ಸಲ್ಲಿಸಿದ್ದರು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಪುತ್ತೂರು ಸೆಷನ್ ನ್ಯಾಯಾಲಯವು ಈ ಪ್ರಕರಣದ ದೂರುದಾರರಾದ ಜಯಂತಿ ಬಲ್ನಾಡ್, ಮುಖ್ಯ ಸಾಕ್ಷಿದಾರರಾದ ಎಚ್ ಮಹಮ್ಮದ್ ಅಲಿ ಹಾಗೂ ಜಿನ್ನಪ್ಪ ನಾಯ್ಕ್ ರವರ ವಿಚಾರಣೆ ನಡೆಸಿತ್ತು. ಬಳಿಕ ದೂರುದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಲವು ಈ ಜಾತಿ ನಿಂದನೆ ಕೇಸ್ ನ ಬಗ್ಗೆ ಪುತ್ತೂರು ಡಿವೈಎಸ್ಪಿ ನ್ಯಾಯಲಯಕ್ಕೆ ಹಾಕಿದ್ದ ಬಿ ರಿಪೋರ್ಟ್ ನ್ನು ರದ್ದು ಪಡಿಸಿ ರೂಪ ಶೆಟ್ಟಿಗೆ 2022 ಫೆ.22 ರಂದು ನ್ಯಾಯಾಲಯ ಹಾಜರಾಗಲು ಸಮನ್ಸ್ ಜಾರಿ ಮಾಡಿತ್ತು.
ರೂಪ ಶೆಟ್ಟಿಯವರು ಕೋರ್ಟ್ ಸಮನ್ಸ್ ನಂತೆ 2022 ಫೆ.22 ರಂದು ಕೋರ್ಟ್ ಗೆ ಹಾಜರಾಗದೆ ಅಂದು ಗೈರು ಹಾಜರಾಗಿದ್ದರು. ಕೋರ್ಟ್ ಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ರೂಪ ಶೆಟ್ಟಿ ಯವರ ವಿರುದ್ಧ ಕೋರ್ಟ್ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆ 2022 ಮಾ.3 ರಂದು ರೂಪ ಶೆಟ್ಟಿಯವರು ಪುತ್ತೂರು ಸೆಷನ್ ಕೋರ್ಟ್ ಗೆ ಸೆರಂಡರರಾಗಿದ್ದರು. ಸೆಷನ್ ನ್ಯಾಯಾಲಯ ರೂಪ ಶೆಟ್ಟಿ ಯವರಿಗೆ 1ಲಕ್ಷ ರೂ. ವೈಯುಕ್ತಿಕ ಬಾಂಡ್ ಹಾಗೂ ಕೆಲವು ಷರತ್ತು ಗಳನ್ನು ವಿಧಿಸಿ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ಬಗ್ಗೆ ದೂರು ದಾರರ ಪರ ನ್ಯಾಯವಾದಿ ಗಳಾದ ಪ್ರಶಾಂತ್ ರೈ ಹಾಗೂ ಹರಿಪ್ರಸಾದ್ ಪಿ ರೈ ಯವರು ವಾದಿಸಿದರು.