ಬಂಟ್ವಾಳ: ಬೈಕ್ ನಲ್ಲಿ ಬಂದ ಇಬ್ಬರು ಆಗಂತುಕರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಳೆದು ಪರಾರಿಯಾದ ಘಟನೆ ನಿನ್ನೆ ಬೆಳಿಗ್ಗೆ ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ನಡೆದಿದೆ.
ಈ ಕುರಿತು ಕೈಕುಂಜೆ ಪೂರ್ವ ಬಡಾವಣೆ ನಿವಾಸಿ ಮಹಿಳೆ ಸುಲೋಚನಾ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.
ಸುಲೋಚನಾರವರು ಮನೆಯಿಂದ ಹೊರಟು ಕೈಕುಂಜೆಯಲ್ಲಿ ಹೊಲಿಯಲು ಕೊಟ್ಟ ಬಟ್ಟೆಯನ್ನು ಪಡೆದುಕೊಂಡು ವಾಪಸ್ ಬರುತ್ತಿರುವ ಸಂದರ್ಭದಲ್ಲಿ ಬಡಾವಣೆಯ ರಸ್ತೆಯಲ್ಲಿ ಎದುರಿಗೆ ಬೈಕೊಂದು ಬಂದಿತ್ತು. ಅದರಲ್ಲಿ ಇಬ್ಬರು ಅಪರಿಚಿತರು ಇದ್ದು, ಹಿಂಬದಿ ಸವಾರ ಕುತ್ತಿಗೆಯಲ್ಲಿದ್ದ ಅಂದಾಜು 1 ಲಕ್ಷ ರೂ ಮೌಲ್ಯದ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ವಿವೇಕಾನಂದ ಮತ್ತವರ ತಂಡ ಕಾರ್ಯಾಚರಣೆ ನಡೆಸಲು ಆರಂಭಿಸಿತು. ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಹಾಡಹಗಲೇ ಇಂತಹ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.