ಬೆಳ್ತಂಗಡಿ: ಐತಿಹಾಸಿಕ ಹಿನ್ನಲೆಯುಳ್ಳ ಬೆಳ್ತಂಗಡಿ ತಾಲೂಕಿನ ಅತೀ ದೊಡ್ಡ ಕೆರೆ ಎಂಬ ಖ್ಯಾತಿಗೆ ಪಾತ್ರವಾಗಿರುರುವ ಪೇಟೆಗೆ ತಾಗಿಕೊಂಡೇ ಇರುವ ಗುರುವಾಯನಕೆರೆಗೆ ದುಷ್ಕರ್ಮಿಗಳು ವಿಷ ಹಾಕಿದ ಆತಂಕಕಾರಿ ಘಟನೆಯೊಂದು ಮಾ.14 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ವಿಷ ಪ್ರಾಶನದಿಂದ ಕೆರೆಯಲ್ಲಿದ್ದ ಸಾವಿರಾರು ಮೀನುಗಳ ಮಾರಣಹೋಮ ನಡೆದಿದ್ದು, ಮೀನಿನ ಮೃತ ದೇಹಗಳು ನೀರಿನ ಮೇಲೆ ತೇಲಾಡುತ್ತಿದೆ. ಇನ್ನಷ್ಟು ಮೀನುಗಳು ಜೀವನ್ಮರಣ ಹೋರಾಟ ನಡೆಸುತ್ತಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 7 ಎಕ್ರೆಯಷ್ಟು ವಿಶಾಲ ಪ್ರದೇಶದಲ್ಲಿ ಇರುವ ಈ ಕೆರೆಯಲ್ಲಿ ಈ ಮೊದಲೇ ಗ್ರಾ.ಪಂಚಾಯತ್ ಮೀನು ಹಿಡಿಯುವುದನ್ನು ನಿಷೇಧಿಸಿತ್ತು. ಆ ಕಾರಣಕ್ಕಾಗಿಯೇ ಕೆರೆಗೆ ವಿಷ ಹಾಕಿರಬಹುದೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.