ಬೆಳಗಾವಿ: ಸೋಶಿಯಲ್ ಮೀಡಿಯಾ ಒಳ್ಳೆಯ ಕೆಲಸಕ್ಕೆ ಎಷ್ಟು ಉಪಯುಕ್ತವಾಗುತ್ತಿದೆಯೋ, ಅಷ್ಟೇ ಕೆಟ್ಟ ಕೆಲಸಕ್ಕೂ ಸಹಾಯಕವಾಗುತ್ತಿದೆ. ಮೊದಲಿನಿಂದಲ್ಲೂ ಹಣ ಮಾಡಬೇಕು, ದೊಡ್ಡ ಶ್ರೀಮಂತನಾಗಬೇಕೆಂದು ಕನಸು ಕಟ್ಟಿಕೊಂಡಿದ್ದ ಬ್ಯಾಂಕ್ ಕ್ಯಾಸಿಯರ್ ಒಬ್ಬ, ಯೂಟ್ಯೂಬ್ ನೋಡಿ ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಲೂಟಿ ಮಾಡಿ ಇದೀಗ ಪೋಲಿಸರ ಅತಿಥಿಯಾಗಿದ್ದಾನೆ.
ಮಾರ್ಚ್ 5, 2021. ಸಂಜೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಡಿಸಿಸಿ ಬ್ಯಾಂಕ್ನಲ್ಲಿ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಆಗಷ್ಟೇ ಮನೆಗೆ ತೆರಳಿದ್ದರು. ಸೆಕ್ಯೂರಿಟಿ ಕೂಡ ರಾತ್ರಿ ಬ್ಯಾಂಕಿನಲ್ಲಿಯೇ ಮಲಗುವುದಾಗಿ ಹೇಳಿ ಹೋಗಿದ್ದ. ಆದರೆ ಯಾವಾಗ ಸಿಬ್ಬಂದಿ, ಅಧಿಕಾರಿಗಳು ಹೊರಟು ಹೋದರೋ, ಆಗಲೇ ಬ್ಯಾಂಕ್ನ ಕ್ಯಾಶಿಯರ್ ಒಳನುಗ್ಗಿದ್ದ. ಹೊರಗಡೆ ಕಾರಿನಲ್ಲಿ ಇವನ ಸ್ನೇಹಿತರು ಕಾಯುತ್ತಾ ಕುಳಿತುಕೊಂಡಿದ್ದರು.
ಸ್ವಾಮೀಜಿ ಫೋಟೋಗೆ ಕೈಮುಗಿದು ಒಳನುಗ್ಗಿದ..!
ಒಳ ಹೋದ ಕ್ಯಾಸಿಯರ್ ಬಸವರಾಜ್ ಹುಣಸಿಕಟ್ಟಿ, ಮೊದಲು ಮುರುಗೋಡದ ಮಹಾಂತ ಸ್ವಾಮೀಜಿಗಳ ಫೋಟೋಕ್ಕೆ ಕೈ ಮುಗಿದು ನಮಸ್ಕಾರ ಮಾಡಿ, ಮೊದಲೇ ತಯಾರಿಸಿ ತಂದಿದ್ದ ನಕಲಿ ಕೀ ಬಳಸಿ ಸ್ಟ್ರಾಂಗ್ ರೂಂ, ಲಾಕರ್ಗಳನ್ನ ಓಪನ್ ಮಾಡಿ 4,37,59,000 ರೂಪಾಯಿ ಹಾಗೂ 1,63,72,220 ರೂಪಾಯಿ ಮೌಲ್ಯದ 3 ಕೆ.ಜಿ. 148 ಗ್ರಾಂ ಚಿನ್ನವನ್ನು ಚೀಲವೊಂದರಲ್ಲಿ ತುಂಬುತ್ತಾನೆ. ಅದಾದ ನಂತರ ನೇರವಾಗಿ ಸಿಸಿಟಿವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ತೆಗೆದುಕೊಂಡು ಯಾವುದೇ ಸಾಕ್ಷಿ ಇಲ್ಲದಂತೆ ನೋಡಿಕೊಂಡು ಹಣವನ್ನು ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಕಾರಿನಲ್ಲಿ ತುಂಬಿಕೊಂಡು ಹೋಗುತ್ತಾರೆ.
ಮರುದಿನ ಬೆಳಗಿನ ಜಾವ ಬ್ಯಾಂಕ್ ದರೋಡೆಯಾಗಿದೆ ಎನ್ನುವ ಮಾಹಿತಿ ಪಡೆದ ಪೊಲೀಸರು, ಬ್ಯಾಂಕ್ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡುತ್ತಾರೆ. ಈ ವೇಳೆ ಒಂದಿಷ್ಟು ಒಡವೆ, ಹಣ ಬಿಟ್ಟು ಹೋಗಿದ್ದು ಕಂಡು ಆಶ್ಚರ್ಯಚಕಿತರಾಗುತ್ತಾರೆ. ಕಳ್ಳರು ಕದಿಯಬೇಕಾದರೆ ಎಲ್ಲವನ್ನೂ ಕದಿಯಬೇಕಿತ್ತು. ಆದರೆ ಒಂದಷ್ಟು ಹಣ, ಒಡವೆ ಬಿಟ್ಟು ಹೋಗಿರಲು ಹೇಗೆ ಸಾಧ್ಯ ಎಂದು ಪೊಲೀಸರು ತನಿಖೆಗಿಳಿದರು.
ಶ್ವಾನದಳ ಸಹ ಸ್ಥಳಕ್ಕೆ ಆಗಮಿಸಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಈ ಬ್ಯಾಂಕ್ ದರೋಡೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಆಗ ಬ್ಯಾಂಕ್ ಸಿಬ್ಬಂದಿ ವಿವರ ಪಡೆದ ಪೊಲೀಸರ ಮುಂದೆ ಅವತ್ತು ಬೆಳಗಿನ ಜಾವ ಈ ದರೋಡೆ ಮಾಡಿದ್ದ ಕ್ಯಾಸಿಯರ್ ಬಸವರಾಜ್ ಸಂಶಯಾಸ್ಪದವಾಗಿ ಓಡಾಡುತ್ತಿದ್ದ. ಆಗಲೇ ಪೊಲೀಸರು ಇವನ ಮೇಲೆ ಒಂದು ಕಣ್ಣಿಟ್ಟಿದ್ದರು. ವಿಚಾರಣೆ ನಡೆಸಿದಾಗ ತಾನು ಡ್ಯೂಟಿ ಮುಗಿಸಿಕೊಂಡು ನೇರವಾಗಿ ಮನೆಗೆ ಹೋಗಿ ಮಲಗಿದ್ದೆ ಅಂತ ಸುಳ್ಳು ಹೇಳಿದ್ದ.
ಆರೋಪಿ ಬಸವರಾಜ್
ದರೋಡೆ ನಡೆದ ದಿನದ ಕಾಲ್ ಲೋಕೇಶ್ ಪಡೆದ್ದಾಗ ರಾತ್ರಿಯಡೀ ಎಲ್ಲೆಲ್ಲಿ ಓಡಾಡಿದ್ದ ಎನ್ನುವುದನ್ನ ಪಡೆದಾಗ ಈತ ತಾನೇ ದರೋಡೆ ಮಾಡಿದೆ. ಈ ಕೆಲಸಕ್ಕೆ ಸ್ನೇಹಿತರಾದ ಯರಗಟ್ಟಿ ಗ್ರಾಮದ ಗ್ಯಾರೇಜ್ ನಡೆಸುತ್ತಿದ್ದ ಸಂತೋಷ್ ಕಂಬಾರ, ಜೀವಾಪೂರ ಗ್ರಾಮದ ಗಿರೀಶ್ ಸಾಥ್ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಬೆಳಗಾವಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಯಾವ ಕಾರಣಕ್ಕಾಗಿ ಹಣ ಕದ್ದಿದ್ದೇವೆ..? ಎಲ್ಲಿ ಅಡಗಿಸಿಟ್ಟಿದ್ದೀವಿ ಅನ್ನುವ ಕುರಿತು ಕುಲಗೋಡ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಆರೋಪಿ ಬಸವರಾಜ್. ಈತನ ಮಾಹಿತಿ ಆಧರಿಸಿ ಫೀಲ್ಡಿಗಿಳಿದ ಪೊಲೀಸರು ಆರೋಪಿ ಬಸವರಾಜ್ ಊರು ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮಕ್ಕೆ ಹೋಗಿ ಆತನ ಕಬ್ಬಿನ ಹೋಲದಲ್ಲಿ ಶೋಧ ಮಾಡಿದಾಗ ಆಳವಾದ ತಗ್ಗು ತೋಡಿ, ಬಂಗಾರ, ನಗದು ಹುಗಿದಿಟ್ಟು, ಅದರ ಮೇಲೆ ಮಣ್ಣು ಮುಚ್ಚಿ, ಮತ್ತೆ ಎಂದಿನಂತೆ ನೀರು ಹರಿದು ಬಿಡಲಾಗಿತ್ತು.
ಪೊಲೀಸರು ಒಂದಿಷ್ಟು ತೋಯ್ದಿದ್ದ ನೋಟುಗಳನ್ನ ತಂದು ಎಣಿಕೆ ಮಾಡಿದಾಗ ಕದ್ದ ಹಣವೆಲ್ಲ ಅದರಲ್ಲಿತ್ತು. ಬಂಗಾರವೂ ಇತ್ತು. ಏಕಂದ್ರೆ ಹುಗಿದಿಟ್ಟ ಹಣವನ್ನು ರಾತ್ರಿ ಹಗಲು ಕಾಯ್ದಿದ್ದಾರೆ. ಅದೆಲ್ಲವನ್ನೂ ವಶಕ್ಕೆ ಪಡೆದ ಪೊಲೀಸರು ನಿನ್ನೆ ಮುರಗೋಡ ಠಾಣೆ ಮುಂಭಾಗ ಪ್ರದರ್ಶನ ಮಾಡಿದರು. ಅಷ್ಟೇ ಅಲ್ಲ, ರೈತರ ಹಣ ಎಲ್ಲಿಯೂ ಹೋಗಿಲ್ಲ, ಬ್ಯಾಂಕ್ನ ಹಣ ಭದ್ರವಾಗಿದೆ ಎಂಬ ಸಂದೇಶ ನೀಡಿದರು. ಕಳವಾದ ಹಣ, ಬಂಗಾರ ಆಭರಣ ಸಿಕ್ಕಿವೆ ಎಂಬ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಠಾಣೆ ಮುಂಭಾಗ ಜಮಾಯಿಸಿದ್ದರು.
ತಾನೂ ಕೆಲಸ ಮಾಡುತ್ತಿದ್ದ ಬ್ಯಾಂಕನ್ನೇ ದರೋಡೆ ಮಾಡಬೇಕೆಂದು ಕ್ಯಾಸಿಯರ್ ಬಸವರಾಜ ಹಾಗೂ ಆತನ ಸ್ನೇಹಿತರು ಕಳೆದ 7 ತಿಂಗಳ ಹಿಂದೆಯೇ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಆದರೆ ಹಣ ಮಾರ್ಚ್ ತಿಂಗಳಲ್ಲಿ ಸಾಲ ಪಡೆದ ರೈತರು ಸಾಲ ಮರುಪಾವತಿ ಮಾಡುತ್ತಾರೆ. ಹೆಚ್ಚಿನ ಹಣ ಬ್ಯಾಂಕ್ನಲ್ಲಿ ಇರುತ್ತೆ ಅಂತ ಗೊತ್ತಿತ್ತು. ಅದೇ ಕಾರಣಕ್ಕಾಗಿ ದರೋಡೆ ಪ್ಲ್ಯಾನ್ ಮುಂದೂಡುತ್ತಾ ಬಂದಿದ್ದರು. ಅದಕ್ಕಾಗಿ ಡುಬ್ಲಿಕೇಟ್ ಕೀ ಮಾಡಿಕೊಂಡು ಇಟ್ಟುಕೊಂಡಿದ್ದರು. ಒಂದು ಬಾರಿ ದರೋಡೆಗೆ ಮುಂದಾಗಿ ಕಾರಣಾಂತರದಿಂದ ಮಾಡಿರಲಿಲ್ಲ.
ಕೊನೆಗೂ ದರೋಡೆ ಮಾಡಿ ಅದನ್ನ ಹಣ, ಒಡವೆ ಎಲ್ಲಾ ಬೇರೆಡೆ ಸಾಗಿಸಬೇಕು ಎನ್ನುವಷ್ಟರಲ್ಲಿ ಪೊಲೀಸರ ಕೈಗೆ ಸಿಕ್ಕಾಕಿಕೊಂಡು ಜೈಲು ಕಂಬಿ ಸೇರಿದ್ದಾರೆ. ಆದರೆ ಬ್ಯಾಂಕ್ ಮ್ಯಾನೇಜರ್ ಮಾತ್ರ ಕ್ಯಾಸಿಯರ್ ಬಸವರಾಜ್ ಈ ರೀತಿ ದರೋಡೆ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ. ಏಕಂದ್ರೆ ಎಲ್ಲರ ಜೊತೆ ಬಸವರಾಜ ಒಳ್ಳೆಯವನ್ನಾಗಿದ್ದ. ಆದರೆ ಬ್ಯಾಂಕ್ ಸಿಬ್ಬಂದಿ ಹೀಗೆ ದರೋಡೆ ಮಾಡಿರುವುದು ನಮಗೊಂದು ಪಾಠ ಅಂತಿದ್ದಾರೆ ಬ್ಯಾಂಕ್ ಮ್ಯಾನೇಜರ್ ಪ್ರಮೋದ್ ಯಲಿಗಾರ ತಿಳಿಸಿದ್ದಾರೆ.
ಪ್ರಮುಖ ಆರೋಪಿ, ಕ್ಯಾಸಿಯರ್ ಬಸವರಾಜ್ ಹುಣಸಿಕಟ್ಟಿ, ಯೂಟ್ಯೂಬ್ನಲ್ಲಿ ಬ್ಯಾಂಕ್ ದರೋಡೆ ಮಾಡುವುದು ಹೇಗೆ.. ? ಹೇಗೆಲ್ಲಾ ತಪ್ಪಿಸಿಕೊಳ್ಳುವುದು..? ಎನ್ನುವ ಕುರಿತ ವಿಡಿಯೋಗಳನ್ನ ಸದಾ ನೋಡುತ್ತಿದ್ದನಂತೆ. ಅದೇ ವಿಡಿಯೋ ಪ್ರಭಾವದಿಂದ ಈ ರೀತಿ ಮಾಡಿದ್ದಾನೆ ಎನ್ನುವುದು ಸ್ಥಳೀಯರ ಮಾತು. ಅದೇನೇ ಇರಲಿ, ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ನಡೆದ ದರೋಡೆ ಪ್ರಕರಣಗಳಲ್ಲಿ ಇದು ಅತಿ ದೊಡ್ಡ ದರೋಡೆ. ದೊಡ್ಡ ಹಣವನ್ನು ದರೋಡೆ ಮಾಡಿದ್ದರು.