ಕುಂದಾಪುರ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂಬುದಾಗಿ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಮಾ.16 ರಂದು ಶಾಲಾ-ಕಾಲೇಜು ತರಗತಿಗಳು ಪುನರಾರಂಭವಾಗಿದ್ದು, ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುವುದಾಗಿ ಪಟ್ಟು ಹಿಡಿದಿದ್ದ ಕುಂದಾಪುರದ ಜೂನಿಯರ್ ಕಾಲೇಜಿನ 13 ವಿದ್ಯಾರ್ಥಿನಿಯರ ಪೈಕಿ 11 ಮಂದಿ ಗೈರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ತರಗತಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿವಾದ ಮೊದಲು ಆರಂಭವಾದ ಕುಂದಾಪುರದ ಜೂನಿಯರ್ ಕಾಲೇಜಿನಲ್ಲಿ ಇಂದು ಪ್ರಥಮ ಪಿಯುಸಿ ತರಗತಿಗಳು ಮಾತ್ರ ಆರಂಭವಾಗಿದ್ದು, ಕಾಲೇಜಿಗೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಗೇಟ್ ಬಳಿ ಪ್ರಾಂಶುಪಾಲರು, ಉಪನ್ಯಾಸಕರು ವಿದ್ಯಾರ್ಥಿನಿಯರನ್ನು ತಪಾಸಣೆ ನಡೆಸಿಯೇ ತರಗತಿ ಪ್ರವೇಶಿಸಲು ಅನುವು ಮಾಡಿಕೊಟ್ಟರು.
ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದ 13 ವಿದ್ಯಾರ್ಥಿನಿಯರ ಪೈಕಿ 11 ಮಂದಿ ತರಗತಿಗೆ ಹಾಜರಾಗದೆ ಗೈರಾಗಿದ್ದಾರೆ. ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ತರಗತಿಗೆ ಹಾಜರಾಗಿದ್ದಾರೆ. ಸದ್ಯ ಪರಿಸ್ಥಿತಿ ತಣ್ಣಗಾದಂತೆ ಕಾಣುತ್ತಿದ್ದು, ಮುಂದಿನ ಬೆಳವಣಿಗೆ ಯಾವ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ..