ಉಡುಪಿ: ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ವಿಶ್ವನಾಥ ಗೌಡ (62) ಮಾ.17 ರಂದು ಸಂಜೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದ್ರು ಅವರಲ್ಲಿ ಯಕ್ಷಗಾನ ತರಬೇತಿ ಪಡೆದು ನಾಲ್ಕುವರೆ ದಶಕಗಳಿಂದ ಕಲಾಸೇವೆಗೈದ ಇವರು ಸುಂಕದ ಕಟ್ಟೆ, ಕದ್ರಿ, ಕುಂಬಳೆ, ಕರ್ನಾಟಕ ಮೇಳಗಳಲ್ಲಿ ತಿರುಗಾಟ ಮಾಡಿ ಕಳೆದ ಮೂರು ದಶಕಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ದಮಯಂತಿ, ಚಂದ್ರಮತಿ, ಕಯಾದು, ಸೀತೆ, ಶ್ರೀದೇವಿ, ನಂದಿನಿ, ಯಶೋಮತಿ, ಅಜಮುಖಿ, ಶಾರದೆ, ಶಶಿಪ್ರಭೆಯೂ ಸೇರಿದಂತೆ ಹಲವು ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿ ಮಿಂಚಿದ್ದರು. ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.