ಸುಳ್ಯ: ಮನೆಯೊಂದಕ್ಕೆ ದರೋಡೆಕೋರರು ರಾತ್ರಿ ವೇಳೆ ನುಗ್ಗಿ ಮಚ್ಚು ಹಿಡಿದು ಬೆದರಿಸಿ ಚಿನ್ನ ಹಾಗೂ ನಗದು ದೋಚಿರುವ ಘಟನೆ ಸಂಪಾಜೆಯ ಚಟ್ಟೆಕಲ್ಲಿನಲ್ಲಿ ನಡೆದಿದೆ.
ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಎಂಬವರ ಮನೆಗೆ ಮಾ.20ರ ರಾತ್ರಿ ನುಗ್ಗಿದ ದರೋಡೆಕೋರರು ಮನೆಮಂದಿಯನ್ನು ಮಚ್ಚು ಹಿಡಿದು ಬೆದರಿಸಿ 100 ಗ್ರಾಂ. ಚಿನ್ನ ಹಾಗೂ 1.50 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸಂಪಾಜೆಯಲ್ಲಿ ದೇವರ ಪೂಜಾ ಕಾರ್ಯ, ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಕುಟುಂಬ ಹೆಸರುವಾಸಿಯಾಗಿದ್ದಾರೆ. ಅಂಬರೀಶ್ ಭಟ್ ಮಗ ಶ್ರೀವತ್ಸ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗದಲ್ಲಿದ್ದು, ಇತ್ತೀಚೆಗಷ್ಟೇ ತಮ್ಮ ಪತ್ನಿ, ಇಬ್ಬರು ಅವಳಿ ಮಕ್ಕಳೊಂದಿಗೆ ಊರಿಗೆ ಬಂದಿದ್ದರು.
ಘಟನಾ ಸ್ಥಳಕ್ಕೆ ಮಂಗಳೂರಿನಿಂದ ಉನ್ನತ ಮಟ್ಟದ ಪೊಲೀಸ್ ತಂಡ ಆಗಮಿಸಿದ್ದು, ಶ್ವಾನ ದಳ, ಬೆರಳಚ್ಚು ತಂಡಗಳು ಈಗಾಗಲೇ ತನಿಖೆ ನಡೆಸಿದ್ದು, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.


























