ಪುತ್ತೂರು: ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಸ್ಕೂಟರ್ ಸವಾರರೋರ್ವರಿಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ
ಸಿಬ್ಬಂದಿ 2021ರ ರಶೀದಿ ನೀಡಿ ದಂಡ ವಸೂಲಿ ಮಾಡಿರುವ ವಿಚಿತ್ರ ಘಟನೆಯೊಂದು ವರದಿಯಾಗಿದೆ.
ಈ ಕುರಿತು ವಿಚಾರಿಸಲೆಂದು ಮಹಿಳಾ ಪೊಲೀಸ್ ಠಾಣೆಗೆ ಹೋಗಿದ್ದ ನಗರಸಭಾ ಸದಸ್ಯ ಮತ್ತು ಎಸ್.ಐ. ನಡುವೆ
ಮಾತಿನ ಚಕಮಕಿ ನಡೆದು ಬಳಿಕ ನಗರ ಠಾಣೆಯ ಇನ್ಸ್‌ಪೆಕ್ಟರ್ ಆಗಮಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ
ಇತ್ಯರ್ಥಪಡಿಸಿರುವುದಾಗಿ ತಿಳಿದು ಬಂದಿದೆ.
ಕೊಡಿಪ್ಪಾಡಿಯ ಬೆಳಿಯಪ್ಪ ಗೌಡ ಎಂಬವರು ಮಾ.17 ರ ಸೋಮವಾರ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಮಹಿಳಾ
ಪೊಲೀಸ್ ಠಾಣೆ ಎದುರು ರಸ್ತೆಗಸ್ತು ನಿರತರಾಗಿದ್ದ ಪೊಲೀಸರು ಅವರ ಸ್ಕೂಟರನ್ನು ನಿಲ್ಲಿಸಿ ದಾಖಲೆ ಪತ್ರ ಪಡೆದುಕೊಂಡು ಪರಿಶೀಲನೆ ನಡೆಸಿ ಕೊನೆಗೆ ನಂಬರ್ ಪ್ಲೇಟ್ ಸರಿ ಇಲ್ಲ ಎಂದು ಹೇಳಿ ರೂ.500 ದಂಡ
ಪಡೆದುಕೊಂಡಿದ್ದರು.
ಆದರೆ ಬೆಳಿಯಪ್ಪ ಗೌಡ ಅವರಿಗೆ ದಂಡ ವಸೂಲಿ ಬಗ್ಗೆ ನೀಡಿದ್ದ
ರಶೀದಿಯಲ್ಲಿ ಅಪರಾಧ ವಿಭಾಗದಲ್ಲಿ ‘ವಿದೌಟ್ ಸೀಟ್ ಬೆಲ್ಸ್’ ಎಂದು ಬರೆಯಲಾಗಿತ್ತು. ಮಾತ್ರವಲ್ಲದೆ ರಶೀದಿಯಲ್ಲಿ 23-2-2021ರ ದಿನಾಂಕವನ್ನು ನಮೂದಿಸಿರುವುದು ಅವರ
ಗಮನಕ್ಕೆ ಬಂದಿತ್ತು. ಇದರಿಂದ ಸಂಶಯಗೊಂಡ ಅವರು ಈ ಕುರಿತು ಎಸ್.ಐ ಅವರಲ್ಲಿ ವಿಚಾರಿಸಿದಾಗ ಯಾವುದೇ ಸ್ಪಂದನೆ ಸಿಗಲಿಲ್ಲವೆಂದು ತನ್ನ ಪರಿಚಯದ ನಗರಸಭಾ
ಸದಸ್ಯರೊಬ್ಬರಿಗೆ ಅವರು ಈ ವಿಚಾರ ತಿಳಿಸಿದ್ದರು.
ಬೆಳಿಯಪ್ಪ ಗೌಡರು ನೀಡಿದ್ದ ಮಾಹಿತಿಯ ಕುರಿತು ವಿಚಾರಿಸಲೆಂದು ಮಾ.22 ರಂದು ನಗರಸಭಾ ಸದಸ್ಯ
ಶಿವರಾಮ ಸಪಲ್ಯ ರವರು ಮಹಿಳಾ ಪೊಲೀಸ್ ಠಾಣೆಗೆ ಬಂದು ಸ್ಕೂಟರ್ ಸವಾರ ಬೆಳಿಯಪ್ಪ ಗೌಡರಿಗೆ ‘ಸೀಟ್ ಬೆಲ್ಟ್ ಹಾಕಿಲ್ಲ’ ಎಂದು ದಂಡ ವಸೂಲಿ ಮಾಡಿ, 2021ರ ರಶೀದಿ ನೀಡಿದ್ದ ಕುರಿತು ವಿಚಾರಿಸಿದ್ದರು. ಮಾತ್ರವಲ್ಲದೆ ಸ್ಕೂಟರ್ ಸವಾರನಿಂದ ‘ವಿದೌಟ್ ಸೀಟ್ ಬೆಲ್ಟ್ ಅಪರಾಧಕ್ಕೆಂದು ವಸೂಲಿ ಮಾಡಿದ್ದ ದಂಡದ ಹಣವನ್ನು ಅವರಿಗೆ ಹಿಂದಿರುಗಿಸುವಂತೆ ಒತ್ತಾಯಿಸಿದರು. ಈ ವೇಳೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಸ್.ಐ ಮತ್ತು ನಗರಸಭಾ ಸದಸ್ಯನ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಅವರು ಆಗಮಿಸಿ ಪ್ರಕರಣವನ್ನು ಸೌಹಾರ್ದತೆಯಲ್ಲಿ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.