ಪುತ್ತೂರು: ಅಪರಿಚಿತ ಮೊಬೈಲ್ ನಂಬರ್ ನಿಂದ ಕರೆ ಮಾಡಿ ಬಿಜೆಪಿ ಮುಖಂಡರೋರ್ವರಿಗೆ ಜೀವ ಬೆದರಿಕೆ ಹಾಕಿದ ಘಟನೆ ಈಶ್ವರಮಂಗಲದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಹಾಗೂ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಹಾಸ ಈಶ್ವರಮಂಗಲ ರವರಿಗೆ ಯಾರೋ ಅಪರಿಚಿತರು ಕರೆ ಮಾಡಿ ‘ಶರತ್ ಮಡಿವಾಳನನ್ನು ಹತ್ಯೆ ಮಾಡಿದಂತೆಯೇ ನಿನ್ನನ್ನು ಹತ್ಯೆ ಮಾಡುವುದಾಗಿ’ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸದ್ರಿ ದೂರು ಪ್ರಕರಣವಾಗಿರುವ ಕಾರಣ, ನ್ಯಾಯಾಲಯದ ಅನುಮತಿ ಪಡೆದು ತಂದಲ್ಲಿ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವುದಾಗಿ ಹಿಂಬರಹ ನೀಡಲಾಗಿತ್ತು.
ಚಂದ್ರಹಾಸ ಎಂ. ರವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎ .ಎಸ್.ಸಿ.ಜೆ, ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಪುತ್ತೂರಿನಲ್ಲಿ Criminal misc 20-20222 ರಂತೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಮಾ.21 ರಂದು ಆದೇಶಿಸಿದ್ದು, ಮಾ.23 ರಂದು ಆದೇಶ ಪ್ರತಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು, ಈ ಬಗ್ಗೆ ಠಾಣೆಯಲ್ಲಿ ಅಕ್ರ:40/2022 ಕಲಂ: 507,506,504 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಹಾಸ ಎಂ. ರವರ ಪರವಾಗಿ ನ್ಯಾಯವಾದಿ ಚಿನ್ಮಯ್ ಈಶ್ವರಮಂಗಲ ವಾದಿಸಿದರು.