ಉಡುಪಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಬಹಿಷ್ಕಾರ ಹಿನ್ನೆಲೆಯಲ್ಲಿ ಇಂದು ಮುಸ್ಲಿಂ ವರ್ತಕರು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದರು.
ಶ್ರೀ ರಾಮ ವಿಠಲ ಸಭಾ ಭವನದಲ್ಲಿ ಭೇಟಿ ಮಾಡಿದ ವರ್ತಕರು, ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಯಿಂದ, ಮುಸಲ್ಮಾನರು, ಕ್ರೈಸ್ತ ಮುಖಂಡರು ವ್ಯಾಪಾರಸ್ಥರು ಪೇಜಾವರ ಶ್ರೀಗಳಿಗೆ ಮನವಿ ಸಲ್ಲಿಸಿದ್ದಾರೆ. ಅಬೂಬಕ್ಕರ್ ಆತ್ರಾಡಿ ನೇತೃತ್ವದಲ್ಲಿ ವ್ಯಾಪಾರಿಗಳ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದೆ.
ಬಳಿಕ ಮಾತನಾಡಿದ ಪೇಜಾವರ ಶ್ರೀಗಳು, ಯಾರಿಂದ ಅನ್ಯಾಯವಾಗಿದೆ ಅವರು ಸಮಸ್ಯೆ ಸರಿ ಮಾಡಿಕೊಳ್ಳಬೇಕು. ತಪ್ಪು ಮಾಡಿದವರನ್ನು ಆ ಸಮಾಜ ಶಿಕ್ಷಿಸಲಿ. ಒಬ್ಬರು ಮಾಡಿದ ಅನ್ಯಾಯ ಇಡೀ ಸಮಾಜಕ್ಕೆ ತಟ್ಟುತ್ತದೆ. ನಾಲ್ಕು ಮಂದಿ ಧಾರ್ಮಿಕ ಮುಖಂಡರು ಕುಳಿತು ಮಾತನಾಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಾಗಿದೆ ಎಂದರು.
ಈ ಬೆಳವಣಿಗೆಗೆ ಕಾರಣ ಏನು ಎಂಬುದು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಬೇಕು. ನಾವು ಶಾಂತಿ ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಅದು ಸಾಧ್ಯವಿಲ್ಲ ಎಂದು ಶ್ರೀಗಳು ಹೇಳಿದರು.