ಚಾಮರಾಜನಗರ: ಸಹೋದರನ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ತೆರಳಿದ್ದ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ಗುಂಡ್ಲುಪೇಟೆಯ ಹೊಸೂರು ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚಿಕ್ಕರಾಜು (30) ಕೊಲೆಯಾದ ದುರ್ದೈವಿ.
ಯುವತಿ ಕುಟುಂಬಸ್ಥರು ಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಬುದ್ದಿವಾದ ಹೇಳಿದ್ದರು. ಈ ಬಗ್ಗೆ ಎರಡು ದಿನಗಳ ಹಿಂದೆ ಗಲಾಟೆ ಸಹ ನಡೆದಿತ್ತು. ಬೆಂಗಳೂರಿನಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಚಿಕ್ಕರಾಜು ಸಹೋದರ ವಿನೋದ್ ಜೊತೆಗೆ ಜಗಳ ಮಾಡಿದ್ದು ಯಾಕೆ ಎಂದು ಕೇಳಲು ಶನಿವಾರ ರಾತ್ರಿ ಮಹದೇವನಾಯ್ಕ ಅವರ ಮನೆಗೆ ತೆರಳಿದ್ದರು.
ಈ ವೇಳೆ ಯುವತಿಯ ತಂದೆ ಮಹದೇವನಾಯ್ಕ ಹಾಗೂ ಸಹೋದರರಾದ ಕಿರಣ, ಅಭಿಷೇಕ ಚಾಕು ಇರಿದು ಕೊಲೆ ಮಾಡಲಾಗಿದೆ. ತೀವ್ರ ಗಾಯಗೊಂಡಿದ್ದ ಚಿಕ್ಕರಾಜು ಅವರನ್ನು ಆಸ್ಪತ್ರೆಗೆ ರವಾನಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇನ್ನೂ ಕೊಲೆ ಮಾಡಿದ ಆರೋಪಿಗಳೆಲ್ಲ ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.