ಬೆಳಗಾವಿ: ಅಂಕೋಲಾದ ಉದ್ಯಮಿ, ಬಿಜೆಪಿ ಮುಖಂಡ ಆರ್.ಎನ್. ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋಕಾ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯ ಆಪಾದಿತರಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಿದೆ. ಭೂಗತ ಪಾತಕಿ ಬನ್ನಂಜೆ ರಾಜಾ ಸಹಿತ 9 ಆರೋಪಿಗಳನ್ನು ದೋಷಿಗಳು ಎಂದು ನ್ಯಾಯಾಧೀಶ ಸಿ.ಎಂ. ಜೋಶಿ ಘೋಷಿಸಿದ್ದರು.
ಉಡುಪಿ ಮೂಲದ ಬನ್ನಂಜೆ ರಾಜಾ, ಉತ್ತರ ಪ್ರದೇಶದ ಜಗದೀಶ್ ಪಟೇಲ್, ವಿಜಯಪುರದ ಅಂಬಾಜಿ ಬಂಡುಗೋರ, ಕಾರ್ಕಳದ ಮಂಜುನಾಥ ನಾರಾಯಣ ಭಟ್, ಕೇರಳದ ಕೆ.ಎಂ. ಇಸ್ಮಾಯಿಲ್, ಅಚ್ಚಂಗಿ ಮಹೇಶ, ಸುಳ್ಯ ಸಂತೋಷ, ಜಗದೀಶಚಂದ್ರ ರಾಜ್ ಅರಸ್, ಅಂಕಿತಕುಮಾರ ಕಷ್ಯಪ್ ದೋಷಿಗಳಾಗಿದ್ದರು.
ರಬ್ದಿನ್ ಸಲೀಂ, ಮಹ್ಮದರ್ಷದ ಶಾಬಂದರಿ ಹಾಗೂ ಆನಂದ ನಾಯಕ ಎಂಬವರು ದೋಷಮುಕ್ತರಾಗಿದ್ದರು. ಭಟ್ಕಳದ ನಾಜೀಮ್ ನಿಲಾವರ್, ಮಂಗಳೂರಿನ ಹಾಜಿ ಆಮಿನ್ ಬಾಷಾ ಹಾಗೂ ಸಕಲೇಶಪುರದ ಸುಲೇಮಾನ್ ಜೈನುದ್ದೀನ್ ತಲೆಮರೆಸಿಕೊಂಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಕೆ.ಜಿ. ಪುರಾಣಿಕಮಠ ಹಾಗೂ ಹೆಚ್ಚುವರಿ ವಿಶೇಷ ಅಭಿಯೋಜಕ ಶಿವಪ್ರಸಾದ ಆಳ್ವ ವಾದಿಸಿದ್ದರು.