ಸುಳ್ಯ: ತಾಲೂಕು ಸಂಪಾಜೆ ಗ್ರಾಮದ ಚಟ್ಟೆ ಕಲ್ಲು ಎಂಬಲ್ಲಿರುವ ಅಂಬರೀಶ್ ಎಂಬವರ ಮನೆಗೆ ದುಷ್ಕರ್ಮಿಗಳು ಒಳಪ್ರವೇಶಿಸಿ ಮನೆಯಲ್ಲಿದ್ದ ಸುಮಾರು 1,52,000/- ನಗದು ಮತ್ತು ಸುಮಾರು 83 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ದರೋಡೆ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಾರ್ತಿಕ್, ಯಧುಕುಮಾರ್, ದೀಕ್ಷಿತ್ ಕೆ.ಎನ್, ಬಿ. ನರಸಿಂಹನ್ ಬಂಧಿತ ಆರೋಪಿಗಳು.
ಆರೋಪಿಗಳಿಂದ ದರೋಡೆ ಮಾಡಿದ ನಗದು ಹಣದ ಪೈಕಿ 20000/- ಮತ್ತು ಆರೋಪಿಗಳು ಕೃತ್ಯದ ಸಮಯ ಉಪಯೋಗಿಸಿದ ವಾಹನ ಮತ್ತು 5 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕ ಸೋನಾವನ ಋಷಿಕೇಶ್ ಭಗವಾನ್ ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ರವರ ಸೂಚನೆಯಂತೆ ಪೊಲೀಸ್ ಉಪಾಧೀಕ್ಷಕರಾದ ಕು. ಗಾನಾ.ಪಿ.ಕುಮಾರ್ ರವರು ನವೀನ್ ಚಂದ್ರ ಜೋಗಿ, ಪೊಲೀಸ್ ವೃತ್ತ ನಿರೀಕ್ಷಕರು, ಸುಳ್ಯ ವೃತ್ತ ನೇತ್ರತ್ವದಲ್ಲಿ ವಿವಿಧ ತಂಡಗಳನ್ನು ರಚಿಸಿ ಪತ್ತೆಗೆ ಪ್ರಯತ್ನಿಸಿದ್ದರು.
ಪ್ರಕರಣದಲ್ಲಿ ತನಿಖೆ ಮುಂದುವರೆಸಿ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ತಮಿಳುನಾಡು ಮೂಲದ ಸೆಂಥಿಲ್, ಪಾಂಡಿಸಂ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ನ್ಯಾಯಾಂಗ ಬಂಧನಲ್ಲಿದ್ದ ಆರೋಪಿ ಸೆಂಥಿಲ್ ಎಂಬಾತನನ್ನು ಪೊಲೀಸ್ ಭದ್ರಿಕೆಗೆ ಪಡೆದುಕೊಂಡು ತನಿಖೆ ಮುಂದುವರೆಸಿ ಆರೋಪಿಯು ತೋರಿಸಿಕೊಟ್ಟಂತೆ ಒಟ್ಟು 71.52 ಗ್ರಾಂ ಚಿನ್ನಾಭರಣಗಳು ಮತ್ತು ನಗದು 11590/-ರೂಗಳನ್ನು ಕೃತ್ಯಕ್ಕೆ ಉಪಯೋಗಿಸಿದ ವಾಹನ ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ತನಿಖೆ ಮುಂದುವರೆದಿದ್ದು ಉಳಿದ ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಸಲಾಗುತ್ತಿದೆ.