ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2020ರ ಬ್ಯಾಚ್ ನ ಇಬ್ಬರು ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವ ಮೂಲಕ ಸಂಸ್ಥೆಗೆ ಗೌರವ ತಂದಿದ್ದಾರೆ.
5 ವರ್ಷದ ಕಾನೂನು ಪದವಿಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಬದ್ರುದ್ದೀನ್ ಅವರು ಕನ್ನಡ ಮಾಧ್ಯಮದಲ್ಲಿ ನಾಲ್ಕನೇ ರ್ಯಾಂಕ್ ಹಾಗೂ ಬಿ. ಸಿಂಧು ಅವರು ಇಂಗ್ಲಿಷ್ ಮಾಧ್ಯಮದಲ್ಲಿ 8ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಇವರಿಬ್ಬರಿಗೆ ಧಾರವಾಡ ಕೃಷಿ ವಿವಿಯ ರೈತ ಜ್ಞಾನ ಕೇಂದ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲ ಭಾವರ್ ಚಂದ್ ಗೆಹಲೊಟ್ ಅವರು ಪದವಿ ಪ್ರದಾನ ಮಾಡಿದರು.
ಅಬ್ಬಾಸ್ ಬಟಾರಿ ಮತ್ತು ಸಾರಮ್ಮ ದಂಪತಿಗಳ ಪುತ್ರನಾಗಿರುವ ಬದ್ರುದ್ದೀನ್ ಪ್ರಸ್ತುತ ಬೆಂಗಳೂರಿನಲ್ಲಿ ಕಿರಿಯ ವಕೀಲರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.
ಬಿ. ಸಿಂಧು ಮೂಲತಃ ಪಿರಿಯಾಪಟ್ಟಣ ತಾಲೂಕು ಚಪ್ಪರದಳ್ಳಿ ಗ್ರಾಮದವರಾಗಿದ್ದು, ಬೆಂಗಳೂರಿನ ಜಿಲ್ಲಾ ನ್ಯಾಯಾಧೀಶರಾಗಿರುವ ಸಿ. ಕೆ ಬಸವರಾಜು ಮತ್ತು ಸಿ.ಎನ್.ಮಂಜುಳಾ ದಂಪತಿಗಳ ಪುತ್ರಿಯಾಗಿದ್ದು, ಸದ್ಯ ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಎಲ್ ಎಲ್ ಎಂ ಶಿಕ್ಷಣ ಪಡೆಯುತ್ತಿದ್ದಾರೆ.