ಹುಬ್ಬಳ್ಳಿ: ಮುಸ್ಲಿಂ ಯುವಕನನ್ನು ಪ್ರೀತಿಸಿ ಆತನ ಜೊತೆ ರಿಜಿಸ್ಟ್ರಾರ್ ಮದುವೆ ಮಾಡಿಕೊಂಡ ಯುವತಿಯ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ನಡೆದಿತ್ತು. ಈ ಕುರಿತು ಯುವತಿಯ ತಂದೆ ತಾಯಿಯರು ಲವ್ ಜಿಹಾದ್ ಎಂಬ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಯುವತಿ ಯೂಟರ್ನ್ ಹೊಡೆದಿದ್ದು, ‘ ನಾನು ಮತ್ತೆ ನನ್ನ ತಂದೆ ತಾಯಿಯ ಜೊತೆ ಹೋಗಲ್ಲ. ನಾನು ನನ್ನ ಪತಿ ಜೊತೆಯೇ ಬದುಕುತ್ತೇನೆ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ’ ಎಂದು ಅಂತರ್ ಧರ್ಮೀಯ ಪ್ರೇಮ ವಿವಾಹದ ಬಗ್ಗೆ ಬಂದಿದ್ದ ‘ ಲವ್ ಜಿಹಾದ್’ ಆರೋಪಕ್ಕೆ ತೆರೆ ಎಳೆದಿದ್ದಾಳೆ.
ನಗರದ ಹಳೇ ಹುಬ್ಬಳ್ಳಿಯ ಮುಸ್ಲಿಂ ಯುವಕ ಇಬ್ರಾಹಿಂ ಸೈಯದ್ ಎಂಬಾತನನ್ನು ಉಣಕಲ್‌ನ ಹಿಂದೂ ಯುವತಿ ಸ್ನೇಹಾ ಎಂಬವಳನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಫೆ.11ರಂದು ಮದುವೆಯಾಗಿದ್ದರು.
ವಿಷಯ ತಿಳಿದು ಕುಟುಂಬದವರು, ಸ್ಥಳೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ (ಎಸ್‌ಎಸ್‌ಕೆ) ಸಮುದಾಯ, ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪನಗರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.