ಸುಳ್ಯ: ಗೂನಡ್ಕದಲ್ಲಿ ಮೀಸಲು ಅರಣ್ಯ ಒತ್ತುವರಿ ಮಾಡಿಕೊಂಡು ಮಸೀದಿ ನಿರ್ಮಿಸಿರುವುದನ್ನು ತೆರವು ಮಾಡಬೇಕೆಂದು ನ್ಯಾಯಾಲಯ ಆದೇಶ ಮಾಡಿದ್ದರೂ ಅರಣ್ಯಾಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಸುಳ್ಯದಲ್ಲಿ ಪ್ರತಿಭಟನೆ ನಡೆಸಿ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಸುಳ್ಯ ಜ್ಯೋತಿ ಸರ್ಕಲ್ ಬಳಿ ಸೇರಿದ ಜಾಗರಣಾ ವೇದಿಕೆ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಸುಳ್ಯ ನಗರದಲ್ಲಿ ಮೆರವಣಿಗೆಯಲ್ಲಿ ಬಂದು, ಎ.ಸಿ.ಎಫ್. ಕಚೇರಿಯ ಎದುರು ಸೇರಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿಯವರು “ ಗೂನಡ್ಕ ರಕ್ಷಿತಾರಣ್ಯದ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಸೀದಿ ಹಾಗೂ ಇತರ ಕಟ್ಟಡವನ್ನು ತೆರವು ಮಾಡಬೇಕೆಂದು ೨೦೧೮ರಲ್ಲಿ ಆದೇಶವಾಗಿದೆ. ಆದರೂ ಅರಣ್ಯಾಧಿಕಾರಿಗಳು ಇದುವರೆಗೆ ಕ್ರಮ ಕೈಗೊಂಡಿಲ್ಲ. ಮಸೀದಿ ತೆರವಿಗೆ ಬರುವ ಖರ್ಚುವೆಚ್ಚವನ್ನು ಕೂಡಾ ಅವರಿಂದಲೇ ಭರಿಸಬೇಕೆಂಬ ಆದೇಶವೂ ಇದೆ. ಇದುವರೆಗೆ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎಂಬುದೇ ಪ್ರಶ್ನೆ. ಪಾಪದವ ಮನೆ ಕಟ್ಟಲು ಒಂದು ಅಕೇಶಿಯಾ ಮರ ಕಡಿದರೆ ಅವನ ಮೇಲೆ ತಕ್ಷಣ ಕೇಸು ಜಡಿಯುವ ಅಧಿಕಾರಿಗಳು ಇಲ್ಲಿ ಸುಮ್ಮನಿದ್ದಾರೆ. ಇದಕ್ಕೆ ಸರಿಯಾದ ಉತ್ತರವನ್ನು ಅಧಿಕಾರಿಗಳು ನೀಡಬೇಕು. ಇದೀಗ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಅದಕ್ಕೆ ಕಾರಣ ಅಧಿಕಾರಿಗಳು ಸರಿಯಾದ ದಾಖಲೆ ಪತ್ರಗಳನ್ನು ಒದಗಿಸದಿರುವುದು” ಎಂದು ಅವರು ಹೇಳಿದರಲ್ಲದೆ, ಪ್ರಕರಣ ದಾಖಲಾದ ಕುರಿತು, ನ್ಯಾಯಾಲಯದ ಆದೇಶ ಇನ್ನಿತರ ವಿವರಗಳನ್ನು ಸಭೆಗೆ ನೀಡಿದರು.
ಬಳಿಕ ಮಾತನಾಡಿದ ಭಜರಂಗದಳ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ರವರು, “ಮೀಸಲು ಅರಣ್ಯವನ್ನು ಒತ್ತುವರಿ ಮಾಡಿದಾಗಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ಇದೀಗ ಕಟ್ಟಡ ಕಟ್ಟಿದ್ದಾರೆ. ಅದನ್ನು ತೆರವು ಮಾಡಬೇಕೆಂದು ನ್ಯಾಯಾಲಯ ಆದೇಶ ಮಾಡಿದರೂ ಅಧಿಕಾರಿಗಳು ಆದೇಶ ಪಾಲಿಸಿಲ್ಲ. ಸುಳ್ಯಕ್ಕೆ ೧೧೦ ಕೆ.ವಿ. ಲೈನ್ ಹಾದು ಹೋಗುವ ಜಾಗದಲ್ಲಿ ಅರಣ್ಯ ಸಮಸ್ಯೆ ಇದೆ ಎಂದಾಗ ಅನುಮತಿ ನೀಡದ ಅಧಿಕಾರಿಗಳು ಗೂನಡ್ಕದಲ್ಲಿ ಜಾಗ ಒತ್ತುವರಿ ಮಾಡಿ ಕಟ್ಟಡ ಕಟ್ಟುವಾಗ ಯಾಕೆ ಸುಮ್ಮನಿದ್ದರು. ಹಿಂದು ಸಂಘಟನೆಯ ಕಾರ್ಯಕರ್ತರು ಅನ್ಯಾಯದ ವಿರುದ್ಧ ಯಾವಾಗಲೂ ಹೋರಾಟ ನಡೆಸುತ್ತಾರೆ. ನಮ್ಮ ಕಾರ್ಯಕರ್ತರನ್ನು ಧಮನಿಸುವ ಕೆಲಸ ಆದರೆ ಹಿಂದುತ್ವಕ್ಕಾಗಿ ಏನು ಮಾಡಲು ನಾವು ಸಿದ್ಧರಿದ್ದೇವೆ. ಸ್ವಾತಂತ್ರ್ಯದ ಹೋರಾಟಕ್ಕೆ ಕಿಚ್ಚು ಕೊಟ್ಟ ನೆಲ ಸುಳ್ಯ. ಆದ್ದರಿಂದ ಅಧಿಕಾರಿಗಳು ಧರ್ಮದ ಆಧಾರದಲ್ಲಿ ಕೆಲಸ ಮಾಡಿ. ಅದು ಬಿಟ್ಟು ಅನ್ಯಾಯದ ಮಾರ್ಗ ಹಿಡಿದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ ಶೀಘ್ರವಾಗಿ ಗೂನಡ್ಕದ ಆ ಕ್ರಮ ಕಟ್ಟಡವನ್ನು ತೆರವು ಮಾಡಬೇಕೆಂದು ಅವರು ಆಗ್ರಹಿಸಿದರು.
ಮುಖ್ಯ ಭಾಷಣಗಾರರಾಗಿದ್ದ ಹಿಂದೂ ಜಾಗರಣಾ ವೇದಿಕೆಯ ಮಾತೃ ಸುರಕ್ಷಾ ಮಂಡಳಿ ಸಂಚಾಲಕ ಗಣರಾಜ್ ಭಟ್ ಕೆದಿಲ ಮಾತನಾಡಿ, “ನ್ಯಾಯಾಲಯ ಆದೇಶ ಮಾಡಿದಂತೆ ಗೂನಡ್ಕದ ಮಸೀದಿ ತೆಗೆಯುವ ತಾಕತ್ತು ಅಧಿಕಾರಿಗಳಿಗಿಲ್ಲ. ಆದರೆ ನಮ್ಮ ಕಾರ್ಯಕರ್ತರ ಮೇಲೆ ಕೆಸು ಮಾತ್ರ ಸರಾಗವಾಗಿ ಹಾಕುತ್ತಿರಿ. ನೀವು ನಮಗೆ ಗೌರವ ಕೊಡುವುದು ಬೇಡ. ಆದರೆ ನ್ಯಾಯಾಲಯಕ್ಕೆ ಗೌರವ ಕೊಡಿ. ಆದೇಶವಾದ ಮೇಲೂ ನೀವು ತೆಗೆಯುವುದಿಲ್ಲವಾದರೆ ನಿಮಗೆ ಬಂದ ವಿರೋಧವೇನು..? ಎಂದು ಅವರು ಪ್ರಶ್ನಿಸಿದರು. ಇದು ನಮ್ಮ ಹೋರಾಟದ ಮೊದಲ ಹೆಜ್ಜೆ. ನ್ಯಾಯಾಲಯದ ಆದೇಶದಂತೆ ಸತ್ಯ, ನ್ಯಾಯ, ನಿಷ್ಠೆಯಿಂದ ಅಧಿಕಾರಿಗಳು ಕೆಲಸ ಮಾಡದಿದ್ದರೆ ಜಾಗರಣ ವೇದಿಕೆ ಹೇಳಿದ್ದನ್ನು ಮಾಡಿಯೇ ಮಾಡುತ್ತದೆ. ನಿಗದಿತ ದಿನದಲ್ಲಿ ಆ ಕಟ್ಟಡ ತೆರವು ಮಾಡದಿದ್ದರೆ ಮುಂದೆ ಮಂಗಳೂರು ಕೇಂದ್ರ ಸ್ಥಾನದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಾಲಕ ಮಹೇಶ್ ಉಗ್ರಾಣಿಮನೆ, ಪ್ರಮುಖರಾದ ಜಗದೀಶ್ ನೆತ್ತರಕೆರೆ, ಪ್ರಶಾಂತ್, ಅಜಿತ್ ಹೊಸಮನೆ, ಸೋಮಶೇಖರ ಪೈಕ, ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ, ಚನಿಯ ಕಲ್ತಡ್ಕ, ಮಹೇಶ್ ರೈ ಮೇನಾಲ, ಜಿನ್ನಪ್ಪ ಪೂಜಾರಿ, ಬುದ್ದ ನಾ೦, ಗಣೇಶ್ ಪಿಲಿಕಜೆ, ವರ್ಷಿತ್ ಚೊಕ್ಕಾಡಿ, ಬಾಲಚಂದ್ರ ದೇವರಗುಂಡ, ಲತೀಶ್ ಗುಂಡ್ಯ, ನಿಕೇಶ್ ಉಬರಡ್ಕ, ಧನಪಾಲ ಗೂನಡ್ಕ, ರಮೇಶ ಇರಂತಮಜಲು, ನವೀನ್ ಯಾವಟೆ, ಗುರುದತ್ ನಾಯಕ್, ಸುಭೋದ್ ಶೆಟ್ಟಿ ಮೇನಾಲ, ಕಮಲಾಕ್ಷ ರೈ ಮೇನಾಲ, ಅಜಿತ್ ಬನ್ನೂರು, ಹೇಮಂತ್ ಮಂಡೆಕೋಲು, ಅಶೋಕ್ ಅಡ್ಕಾರ್, ನಯನ ರೈ ಮೇನಾಲ, ರಾಜೇಶ್ ಪಂಚೋಡಿ, ರವೀಶ್ ಕರ್ಲಪ್ಪಾಡಿ, ದಿನೇಶ್ ಕಣಕ್ಕೂರು, ಬೂಡು ರಾಧಾಕೃಷ್ಣ ರೈ, ವೆಂಕಟೇಶ ನಡುಬೆಟ್ಟು, ವೆಂಕಟ್ ವಳಲಂಬೆ, ಶಂಕರ ಪೆರಾಜೆ, ಜಯರಾಜ್ ಕುಕ್ಕೆಟ್ಟಿ, ಸುನಿಲ್ ಕೇರ್ಪಳ, ಸುದರ್ಶನ ಪಾತಿಕಲ್ಲು ಹಾಗೂ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.