ಮಂಗಳೂರು: ಕಂಟೈನರ್ ಲಾರಿಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್ಎಂಪಿಟಿ ಗೇಟ್ ಬಳಿ ನಡೆದಿದೆ.
ಗೋವಾದಿಂದ ತ್ರಿಶೂರ್ ಕಡೆಗೆ ತೆರಳುತ್ತಿದ್ದ ಕಂಟೈನರ್ ವಾಹನ, ಪಣಂಬೂರು ಎನ್ ಎಂಪಿಟಿ ಮುಖ್ಯ ಗೇಟ್ ಬಳಿ ತಲುಪಿದಾಗ ಅದರ ಕ್ಯಾಬಿನ್ ಹಾಗೂ ಬಾಡಿಯ ಹಿಂಭಾಗದ ಮಧ್ಯ ಭಾಗದಲ್ಲಿ ಬೆಂಕಿ ಕಾಣಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಹೊಯ್ಸಳ ಸಿಬ್ಬಂದಿ ಎನ್ ಎಂ ಪಿ ಟಿ ಯವರ ಅಗ್ನಿ ಶಾಮಕ ವಾಹನ ತರಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಜಿನ್ ಶಾರ್ಟ್ ಸೆರ್ಕ್ಯುಟ್ ನಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಲಾರಿಯ ಚಾಲಕ ಮತ್ತು ಹೊಯ್ಸಳ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವಾಹನಕ್ಕೆ ಯಾವುದೇ ನಷ್ಟವುಂಟಾಗಿಲ್ಲ ಮತ್ತು ನಡೆಯಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.