ಪುತ್ತೂರಿನಲ್ಲಿ ಕುತೂಹಲ ಹಾಗೂ ಸಂಚಲನ ಮೂಡಿಸಿದ ಮೈಸೂರಿನ ಫೊಟೋಗ್ರಾಫರ್ ಜಗದೀಶ್ ಕೊಲೆ ಪ್ರಕರಣದ ಬಂಧಿತ ಆರೋಪಿ ಅಣಿಲೆ ಜಯರಾಜ್ ಶೆಟ್ಟಿ (48) ಗೆ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಸುಮಾರು ನಾಲ್ಕೂವರೆ ತಿಂಗಳ ಹಿಂದೆ ಕೊಲೆ ಸಂಚು ರೂಪಿಸಿದ ಆರೋಪದಲ್ಲಿ ಆತನನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು.
ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರ ನಿವಾಸಿಯಾಗಿದ್ದ, ಮೂಲತ: ಮಂಗಳೂರು ತಾಲೂಕು ಕಾವೂರು ಗ್ರಾಮದ ಶಿವನಗರ ಮುಲ್ಲಕಾಡು ಸಿಂಧೂರ ಮನೆ ನಿವಾಸಿ ದಿ.ಶಂಭು ಶೆಟ್ಟಿಯವರ ಮಗ ಜಗದೀಶ್ (58ವ.)ರವರು ತನ್ನ ಖರೀದಿ ಮಾಡಿದ ಜಮೀನು ವೀಕ್ಷಿಸಲು ನ.18 ರಂದು ಆಗಮಿಸಿದವರು ಅದೇ ದಿನ ಸಂಜೆಯಿಂದ ಈಶ್ವರಮಂಗಲದಿಂದ ಕಣ್ಮರೆಯಾಗಿದ್ದರು. ನಾಪತ್ತೆ ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರಿಗೆ ಅವರ ಹತ್ಯೆಯಾಗಿರುವುದು ನ .24 ರಂದು ಬೆಳಕಿಗೆ ಬಂದಿತ್ತು.
ತನ್ನ ಕೃಷಿ ಜಮೀನನ್ನು ನೋಡಲು ನ.18 ರಂದು ಬೆಳಿಗ್ಗೆ ಮೈಸೂರಿನಿಂದ ಪುತ್ತೂರಿಗೆ ಆಗಮಿಸಿ ತನ್ನ ಸಂಬಂಧಿ ಮನೆಗೆ ತೆರಳಿದ್ದ ವೇಳೆ ಅವರನ್ನು ಉಪಾಯವಾಗಿ ಕಾರಿನಲ್ಲಿ ಕೂರಿಸಿ ಹಿಬ್ಬಂದಿಯಿಂದ ಅವರ ತಲೆಗೆ ಹ್ಯಾಮರ್ ನಿಂದ ಬಡಿದು ಹತ್ಯೆಗಯ್ಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಜಗದೀಶ್ ದೂರದ ಸಂಬಂಧಿಯಾಗಿದ್ದ ಹಾಗೂ ಅವರ ಪುತ್ತೂರಿನಲ್ಲಿರುವ ಎರಡು ಜಮೀನಿನ ಪವರ್ ಅಪ್ ಅಟಾರ್ನಿ ಹೋಲ್ಡರ್ ಎನ್ನಲಾಗುತ್ತಿರುವ ನೆಟ್ಟಣಿಗೆಮುಡ್ನೂರು ಗ್ರಾಮದ ಪಟ್ಲಡ್ಕ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ, ಆತನ ಪತ್ನಿ ಜಯಲಕ್ಷ್ಮೀ ರೈ, ಮಗ ಪ್ರಶಾಂತ್ ರೈ ಮತ್ತು ಹತ್ತಿರದ ಮನೆಯ ಸಂಜೀವ ಗೌಡ ಪಟ್ಲಡ್ಕ ಅವರ ಮಗ ಜೀವನ್‌ಪ್ರಸಾದ್ ರವರನ್ನು ನ.24 ರಂದು ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು.
ಬಳಿಕ ಆರೋಪಿಗಳ ಹೆಚ್ಚಿನ ವಿಚಾರಣೆ ವೇಳೆ ಪುತ್ತೂರಿನಲ್ಲಿ ಸಂಚಲನ ಮೂಡಿಸಿದ ನಟೋರಿಯಸ್ ರೌಡಿ ತಿಂಗಳಾಡಿ ಉಮೇಶ್ ರೈ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ, ಸದ್ಯ ಆ ಪ್ರಕರಣದಿಂದ ಲಾಸೆಗೊಂಡಿರುವ ಬಡಗನ್ನೂರು ಗ್ರಾಮದ ಹ್ಯಾಮರ್ ಜಯರಾಜ್ ಅಲಿಯಾಸ್ ಅಣಿಲೆ ಜಯರಾಜ್ ಶೆಟ್ಟಿ (48) ಕೂಡ ಜಗದೀಶ್ ಹತ್ಯೆಯಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ದೊರೆತಿತ್ತು.
ಈ ಹಿನ್ನಲೆಯಲ್ಲಿ ಹತ್ಯೆಯ ಒಳ ಸಂಚು ನಡೆಸಿದ ಆರೋಪದ ಮೇರೆಗೆ ಜಯರಾಜ್ ನನ್ನು ಪೊಲೀಸರು ಬಂಧಿಸಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಇದೀಗ ಆರೋಪಿಯೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಆರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಯರಾಜ್ ಶೆಟ್ಟಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ಪುತ್ತೂರಿನ ನ್ಯಾಯವಾದಿ ಬಿ. ನರಸಿಂಹ ಪ್ರಸಾದ್ ವಾದಿಸಿದರು.