ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಾವೂರದಲ್ಲಿ ಎ.17 ರಂದು ನಡೆಯುವ ಮೂಡೂರು ಪಡೂರು “ಬಂಟ್ವಾಳ” ಕಂಬಳಕ್ಕೆ ಮಾಜಿ ಸಚಿವರಾದ ಬಿ.ರಮಾನಾಥ ರೈ ರವರು ಬಂಟ್ವಾಳದ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಆ ಬಳಿಕ ನಾವೂರಗುತ್ತು ಸುಜಿತ್ ಜೈನ್ ಇವರ ಮನೆಯಲ್ಲಿ ದೈವಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರು ನಾವೂರ ಕಂಬಳದ ಕೆರೆಯ ಮುಹೂರ್ತ ಪೂಜೆಯನ್ನು ನೆರವೇರಿಸಿದರು.
ಒಂದು ದಶಕಗಳ ಕಾಲ ಕಾವಳಕಟ್ಟೆಯಲ್ಲಿ ನಡೆಸುತ್ತಿದ್ದ ಕಂಬಳ ಕಾರಣಾಂತರಗಳಿಂದ ನಿಲುಗಡೆ ಆಗಿತ್ತು. ಅದರ ಪುನರಾರಂಭಕ್ಕೆ ಕೋಣಗಳ ಮಾಲಕರು, ಕಂಬಳಾಭಿಮಾನಿಗಳ ಅಪೇಕ್ಷೆಯಂತೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಸ್ತುತ ಈ ಹಿಂದಿನ ಹೆಸರನ್ನು ಉಳಿಸಿಕೊಂಡು ಪುನರಾರಂಭ ಮಾಡಲಾಗಿದೆ.
ಕಾವಳಕಟ್ಟೆ ಕಂಬಳದ ಮೂಲಕ ಚಿತ್ರರಂಗದ ತಾರೆಯರನ್ನು ಕಾಣುವ ಅವಕಾಶ ಜನತೆಗೆ ಆಗಿತ್ತು. ರಾಜ್ಯದ ಗಣ್ಯರು ಪಾಲ್ಗೊಳ್ಳುತ್ತಿದ್ದರು. ಜನಸಾಮಾನ್ಯರಿಗೂ ಕುಳಿತು ವೀಕ್ಷಿಸಲು ಗ್ಯಾಲರಿ ನಿರ್ಮಾಣ ಇತ್ಯಾದಿ ಹೊಸತನಗಳನ್ನು ಅಳವಡಿಸಿದ ಕೀರ್ತಿ ನಮ್ಮ ಕಂಬಳಕಿತ್ತು. ಅದೇ ಪರಂಪರೆಯನ್ನು ಮುಂದುವರಿಸುವುದಾಗಿ ತಿಳಿಸಿದ ಅವರು ಪ್ರಸ್ತುತ ಬಂಟ್ವಾಳ ಕಂಬಳವು ಜಿಲ್ಲೆಯ ಇತಿಹಾಸದಲ್ಲಿ ಕ್ಷಿಪ್ರ ಅವಧಿಯಲ್ಲಿ ಆಯೋಜಿತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವ್ಯವಸ್ಥೆಗಳು ಸಿದ್ದಗೊಳ್ಳುತ್ತಿದೆ ಎಂದರು.