ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭ ಗಾಳಿ ಮಳೆಗೆ ಹಾನಿಯಾದ ಅಂಗಡಿಗಳ ಚಿತ್ರವನ್ನು ಮುಂದಿರಿಸಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ, ಶಾಂತಿ ಕೆಡಿಸುವಂತಹ ಸಂದೇಶ ರವಾನೆ ಮಾಡುತ್ತಿರುವುದಾಗಿ ಆರೋಪಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ನಗರಸಭೆ
ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ರವರು ದೂರು ನೀಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಅನ್ಯಧರ್ಮೀಯರಿಗೆ ಪುತ್ತೂರು ಜಾತ್ರೆ ಗದ್ದೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿಲ್ಲವಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು, ಗಾಳಿ
ಮಳೆಗೆ ಜಾತ್ರಾ ಗದ್ದೆಯಲ್ಲಿ ಕೆಲವೊಂದು ಅಂಗಡಿಗಳ ತಗಡು ಶೀಟ್‌ಗಳು ಜಾರಿ ಬಿದ್ದಿರುವುದರ ವಿಡಿಯೋ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ರವಾನೆ ಮಾಡಿ ಹಿಂದೂ ಬಾಂಧವರ
ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿರುವ ಕುರಿತು ಮಾಹಿತಿ ತಿಳಿದು ಬಂದಿದೆ. ಇದು ಸಮಾಜದ ಶಾಂತಿ ಕೆಡಿಸುವ ಹುನ್ನಾರ ಆಗಿರುವುದರಿಂದ ಧರ್ಮದ ಹೆಸರಿನಲ್ಲಿ ಈ ರೀತಿ ಅಪಪ್ರಚಾರ ಮಾಡುತ್ತಿರುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಏ.15 ರಂದು ಎಸ್ಪಿಯವರು ಜಾತ್ರಾ ಗದ್ದೆಗೆ ಭೇಟಿ ನೀಡಿದ್ದ ಸಂದರ್ಭ ಪಿ.ಜಿ.ಜಗನ್ನಿವಾಸ ರಾವ್ ಅವರು ಈ ವಿಚಾರವನ್ನು ಎಸ್ಪಿಯವರ ಗಮನಕ್ಕೂ ತಂದಿದ್ದಾರೆ.