ಬಜಪೆ: ಬಜಪೆಯಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿರುವ ಮೀನು ಫ್ಯಾಕ್ಟರಿಯೊಂದರಲ್ಲಿ ದುರಂತ ಸಂಭವಿಸಿದ್ದು ಮೂವರು ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಿನ್ನೆ ಸಂಜೆ ನಡೆದಿದೆ.
ವಿವಿಧೆಡೆಗಳಿಂದ ಬರುವ ಮೀನುಗಳನ್ನು ಶುದ್ಧೀಕರಿಸುವ ಬೃಹತ್ ಟ್ಯಾಂಕಿಗೆ ಇಳಿದ ಪಶ್ಚಿಮ ಬಂಗಾಲದ ಮೂವರು ಕಾರ್ಮಿಕರು ಮೃತಪಟ್ಟರೆ ರಾಜ್ಯದ ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು ಎಂಟು ಮಂದಿಯಲ್ಲಿ ಮೂವರು ಅಪಾಯದಿಂದ ಪಾರಾಗಿದ್ದಾರೆ.
ಮೃತಪಟ್ಟ ಕಾರ್ಮಿಕರನ್ನು ನಿಜಾಮುದ್ದಿನ್ (19), ಉಮ್ಮರ್ ಫಾರೂಕ್ ಮತ್ತು ಸಮೀವುಲ್ಲಾ ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡವರನ್ನು ಶರಪ ತಲಿ, ಮೀರಾದುಲ್ಲಾ ಇಸ್ಲಾಂ ಎಂದು ಗುರುತಿಸಲಾಗಿದೆ. ಹಸನ್ ಅಲಿ, ಮೊಹಮ್ಮದ್ ಕರಿಮುಲ್ಲಾ ಮತ್ತು ಅಭಿದುಲಾ ಮಲಿಕ್ ಅಪಾಯದಿಂದ ಪಾರಾದ ಕಾರ್ಮಿಕರಾಗಿದ್ದಾರೆ. ಎಂದಿನಂತೆ ಮೀನು ಶುದ್ಧೀಕರಣಗೊಳಿಸುವ ಟ್ಯಾಂಕಿಗೆ ಇಳಿದ 8 ಮಂದಿ ಕಾರ್ಮಿಕರು ಸ್ವತ್ಛಗೊಳಿಸಿದ ಮೀನನ್ನು ತೆಗೆಯುವ ಸಂದರ್ಭ ಈ ದುರಂತ ಸಂಭವಿಸಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಪಣಂಬೂರು ಮತ್ತು ಬಜಪೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.